ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕನನ್ನು ಅಪಹರಿಸಿದ ಖತರ್ನಾಕ್​ ಕಳ್ಳ ಸಿಕ್ಕಿಬಿದ್ದಿದ್ದೇ ಅಚ್ಚರಿ! Kidnap

virtual kidnapping
Published on

ಸೂರತ್​: ವ್ಯಕ್ತಿಯೊಬ್ಬ ಮೂರು ವರ್ಷದ ಮಗುವನ್ನು(Kidnap) ಅಪಹರಿಸಿದ್ದು, ಪೊಲೀಸರ ತ್ವರಿತ ಕ್ರಮ ಮತ್ತು ಪರಿಣಾಮಕಾರಿ ಪ್ರಕ್ರಿಯೆಯಿಂದ ಒಂದು ಗಂಟೆಯೊಳಗೆ ಮಗುವನ್ನು ರಕ್ಷಿಸಿರುವ ಘಟನೆ ಗುಜುರಾತ್​ನ ಸೂರತ್​ನಲ್ಲಿ ಇತ್ತೀಚೆಗೆ ನಡೆದಿದೆ.

ಘಟನೆ ಏನು?

ಪೊಲೀಸರ ಪ್ರಕಾರ, ಬುಧವಾರ (ಅ.29) ಸಂಜೆ 4 ಗಂಟೆ ಸುಮಾರಿಗೆ ಸೂರತ್​ನ ಉಧ್ನಾದಲ್ಲಿ ಈ ಘಟನೆ ನಡೆದಿದೆ. ಮಗು ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಆಗಮಿಸಿದ್ದು, ಮಗುವಿಗೆ ಚಾಕಲೇಟ್​ ಮತ್ತು ಹಣ ನೀಡುವ ಆಮಿಷವೊಡ್ಡಿ ಅವನನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದಾದ ಕೆಲವು ಸಮಯದ ನಂತರ ಮಗು ಕಾಣೆಯಾಗಿರುವ ಬಗ್ಗೆ ಗಮನಹರಿಸಿದ ತಾಯಿ ಸಾಧನಾ, ತನ್ನ ಪತಿಗೆ ತಿಳಿಸಿದ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಮಗುವಿನೊಂದಿಗೆ ಅಪರಿಚಿತ ವ್ಯಕ್ತಿಯೊಬ್ಬ ಮಗುವಿನೊಂದಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯಾವಳಿಗಳನ್ನು ಗುರುತಿಸಿದ್ದಾರೆ. ಈ ವೇಳೆ ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ಮಗುವಿಗಾಗಿ ನಗರದಾದ್ಯಂತ ಹುಡುಕಾಟ ನಡೆಸಿದ್ದಾರೆ.

ಅಧಿಕಾರಿಗಳು ಒಂದು ಗಂಟೆಯೊಳಗೆ ಮಾನವ ಗುಪ್ತಚರ ಮತ್ತು ತಾಂತ್ರಿಕ ಕಣ್ಗಾವಲು ಎರಡನ್ನೂ ಬಳಸಿಕೊಂಡು, ಆರೋಪಿಯನ್ನು ಅವನ ನಿವಾಸದ ಹೊರಗೆ ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರೋಪಿಯನ್ನು ಆರಂಭದಲ್ಲಿ ಪಪ್ಪು ಯಾದವ್ ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಮೂಲದ ವ್ಯಕ್ತಿಯಾಗಿದ್ದು, ಕಾರ್ಖಾನೆ ಕೆಲಸಕ್ಕಾಗಿ ಕೇವಲ ಒಂದು ತಿಂಗಳ ಹಿಂದೆ ಸೂರತ್‌ಗೆ ತೆರಳಿದ್ದನು. ಬಾಲಕ ಉದ್ದನೆಯ ಕೂದಲನ್ನು ಹೊಂದಿದ್ದ ಕಾರಣ ಹುಡುಗಿಯೆಂದು ತಿಳಿದು ಅಪಹರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಮಾತನಾಡಿದ ಸೂರತ್ ಎಸಿಪಿ ಮಿನಿ ಜೋಸೆಫ್ ಇಲಾಖೆಯು ಮೂರು ತಂಡಗಳನ್ನು ರಚಿಸಿದ್ದು, ಸುಮಾರು 200 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ನಂತರ, ಆರೋಪಿಗಳನ್ನು ಗುರುತಿಸಿ, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದೇವೆ. ಹಾಗೆಯೇ ಘಟನೆ ನಡೆದ ಒಂದು ಗಂಟೆಯೊಳಗೆ ಮಗುವನ್ನು ರಕ್ಷಿಸಿ ಪಾಲಕರಿಗೆ ಒಪ್ಪಿಸಿದ್ದೇವೆ ಎಂದು ಸುದ್ಧಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಪಹರಣದ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಆರಂಭಿಕ ವಿಚಾರಣೆಯಿಂದ ಆರೋಪಿಗಳು ದುರುದ್ದೇಶಪೂರಿತ ಉದ್ದೇಶದಿಂದ ಅಪಹರಣವನ್ನು ಯೋಜಿಸಿರಬಹುದು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net