

ಹೈದರಾಬಾದ್: ತೆಲಂಗಾಣದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಕಾಂಗ್ರೆಸ್ ಲೀಡರ್ ಮೊಹಮ್ಮದ್ ಅಜರುದ್ದೀನ್(Mohammad Azharuddin) ಇಂದು(ಅ. 31) ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹೈದರಾಬಾದ್ನ ರಾಜಭವನದಲ್ಲಿ ಕಾರ್ಯಕ್ರಮ ನಡೆದಿದ್ದು, ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಅಜರುದ್ದೀನ್ಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಓರ್ವ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿ ಸಚಿವರಾಗಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್ ಸಂಪುಟದಲ್ಲಿ ಓರ್ವ ಮುಸ್ಲಿಂ ಸಚಿವರು ಇರಲಿಲ್ಲ.
ಇನ್ನೂ ಮೊಹಮ್ಮದ್ ಅಜರುದ್ದೀನ್ ತೆಲಂಗಾಣದ ಯಾವುದೇ ಸಭೆಯ ಸದಸ್ಯರಲ್ಲ. ಕಳೆದ ವಿಧಾನಭೆ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಈಗ ಅವರನ್ನು ಆರು ತಿಂಗಳೊಳಗೆ ಎಂಎಲ್ಸಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯಪಾಲರ ಕೋಟಾದಡಿಯಲ್ಲಿ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ, ಆದರೆ ರಾಜ್ಯಪಾಲರು ಆ ಪ್ರಸ್ತಾವನೆಗೆ ಸಹಿ ಹಾಕಿಲ್ಲ ಎಂದು ವರದಿಯಾಗಿದೆ.
ಮೊಹಮ್ಮದ್ ಅಜರುದ್ದೀನ್ ಪ್ರಮಾಣವಚನಕ್ಕೆ ಬಿಜೆಪಿ ಟೀಕೆ
ನ. 11ರಂದು ಹೈದರಾಬಾದ್ ನಗರದ ಜುಬಿಲಿ ಹಿಲ್ಸ್ ಕ್ಷೇತ್ರದ ಉಪಚುನಾವಣೆ ನಡೆಯಲಿರುವ ಹಿನ್ನೆಲೆ ಆ ಕ್ಷೇತ್ರದಲ್ಲಿ ಶೇ. 30ರಷ್ಟಿರುವ ಮುಸ್ಲಿಂ ಮತಗಳನ್ನು ಗುರಿಯಾಗಿಸಿ ಅಜರುದ್ದೀನ್ಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ವಿರೋಧಿಸಿದ್ದು, ಇದು ಚುನವಣಾ ನೀತಿ ಸಂಹಿತೆ ಉಲ್ಲಂಘನೆ ಎಂದು ಇಸಿ ದೂರು ಸಲ್ಲಿಸಿದೆ. (ಏಜೆನ್ಸೀಸ್)