

ವಾಷಿಂಗ್ಟನ್: ಬಿಯರ್ ಕುಡಿದರೆ ಹೊಟ್ಟೆ ಬರುತ್ತೆ ಎಂದು ಕೆಲವರು ಹೇಳಿರುವುದನ್ನು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮನುಷ್ಯ ಅದನ್ನು ಸುಳ್ಳೆಂದು ಸಾಧಿಸಿ ತೋರಿಸಿದ್ದಾನೆ. ಅಮೆರಿಕ ಮೂಲದ ವ್ಯಕ್ತಿಯೊಬ್ಬ ಪ್ರತಿದಿನ ಬರೀ ಬಿಯರ್ಗಳನ್ನೇ ಕುಡಿದು 46 ದಿನಗಳಲ್ಲಿ 18 ಕೆಜಿ ತೂಕ ಇಳಿಸಿಕೊಂಡಿದ್ದಾನೆ.
ಡೇಲ್ ಹಾಲ್ ಹೆಸರಿನ ವ್ಯಕ್ತಿ ಈ ರೀತಿಯಲ್ಲಿ ತೂಕ ಇಳಿಸಿರುವ ಭೂಪ. ಈತ ಈ ಹಿಂದೆ ಸೇನೆಯಲ್ಲಿ ಕೆಲಸ ಮಾಡುತ್ತಿದ್ದನಂತೆ. ಸೇನೆಯಿಂದ ನಿವೃತ್ತನಾದ ನಂತರ ಬಿಯರ್ ಶಾಪ್ ಒಂದರಲ್ಲಿ ಕೆಲಸ ಆರಂಭಿಸಿದ್ದಾನೆ. ಬಿಯರ್ ಶಾಪ್ನಲ್ಲಿ ರೆಸ್ಟೋರೆಂಟ್ ಕೂಡ ಇದ್ದಿದ್ದರಿಂದ ಪ್ರತಿ ದಿನ ತರೇವಾರು ಊಟ ಮಾಡಿ ಬೊಜ್ಜು ಬೆಳೆಸಿಕೊಂಡಿದ್ದ. ಅದರೊಂದಿಗೆ ಬಿಪಿ ಮತ್ತು ಶುಗರ್ ಕೂಡ ಹೆಚ್ಚಿತ್ತು.
ಇತ್ತೀಚೆಗೆ ಆತ ತೂಕ ಇಳಿಸುವ ನಿರ್ಧಾರ ಮಾಡಿದ್ದಾನೆ. ವೈದ್ಯರ ಸಲಹೆಯ ಮೇರೆಗೆ ಊಟ ತಿಂಡಿ ಬಿಟ್ಟಿದ್ದಾನೆ. ಪ್ರತಿ ದಿನ 5 ಬಿಯರ್ ಕುಡಿದು ಹೊಟ್ಟೆ ತುಂಬಿಸಿಕೊಳ್ಳಲಾರಂಭಿಸಿದ್ದಾನೆ. ಈ ರೀತಿ 46 ದಿನಗಳ ಬಿಯರ್ ಡಯೆಟ್ ಮಾಡಿದ್ದಾನೆ. ಇಷ್ಟು ದಿನಗಳಲ್ಲಿ ಒಟ್ಟು 18 ಕೆಜಿ ತೂಕ ಇಳಿಸಿಕೊಂಡಿದ್ದಾನೆ. ಇದರಿಂದಾಗಿ ಆತನ ಬಿಪಿ ಮತ್ತು ಶುಗರ್ ಲೆವೆಲ್ ಕೂಡ ಕಡಿಮೆಯಾಗಿ ಹತೋಟಿಗೆ ಬಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)