ಲಿವ್-ಇನ್ ಸಂಗಾತಿಯ ಹತ್ಯೆ; ಮೃತದೇಹವನ್ನು ಹಾಸಿಗೆಯೊಳಗೆ ತುಂಬಿಸಿಟ್ಟ ಪಾಗಲ್ ಪ್ರೇಮಿ!

live-in partner
Published on

ಮಹಾರಾಷ್ಟ್ರ: ಪ್ರಿಯಕರನೊಬ್ಬ ಲಿವ್-ಇನ್-ಟುಗೆದರ್ ಸಂಬಂಧದಲ್ಲಿದ್ದ ಪ್ರೇಯಸಿಯನ್ನು ಕೊಂದು, ಆಕೆಯ ಮೃತದೇಹವನ್ನು ಹಾಸಿಗೆಯಲ್ಲಿ ತುಂಬಿಸಿಟ್ಟಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಕೊಲೆ ಆರೋಪಿ ಹಾರ್ದಿಕ್ ಶಾ(27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ನಲಸೋಪಾರ ಎಂಬಲ್ಲಿ ನಡೆದಿದೆ. ಪಾಲ್ಘರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾರ್ದಿಕ್ ಶಾ ನಲಸೋಪಾರಾದ ಸೀತಾ ಸದನ್ ಸೊಸೈಟಿ ಎಂಬಲ್ಲಿ ಕೊಲೆಯಾಗಿರುವ ಮೇಘ ಧನ್ ಸಿಂಗ್(35) ಎಂಬಾಕೆಯೊಂದಿಗೆ ವಾಸವಾಗಿದ್ದ. ನೆರೆಹೊರೆಯ ಮಂದಿಯಲ್ಲಿ ನಾವಿಬ್ಬರು ದಂಪತಿಗಳಾಗಿದ್ದು ರಿಯಲ್ ಎಸ್ಟೇಟ್ ಏಜೆಂಟ್ ಹಾಗೂ ಭೂವ್ಯವಹಾರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವರದಿಯ ಪ್ರಕಾರ ಕೊಲೆ ಆರೋಪಿ ಹಾರ್ದಿಕ್ ಶಾ ನಿರುದ್ಯೋಗಿಯಾಗಿದ್ದ. ಈ ಕಾರಣಕ್ಕೆ ಸಂಗಾತಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಈ ವೇಳೆ ಕೊಲೆಯಾದ ದಿನ ಇಬ್ಬರ ನಡುವೆ ಜಗಳ ಜೋರಾಗಿದೆ ಎಂದು ಹೇಳಲಾಗಿದೆ. ಬಳಿಕ ಹಾರ್ದಿಕ್ ಶಾ ಮೇಘಾಳ ಮೃತದೇಹವನ್ನು ಹಾಸಿಗೆಯೊಳಗೆ ತುಂಬಿಸಿದ್ದಾನೆ.

ಹಾರ್ದಿಕ್ ಶಾ ತಂಗಿದ್ದ ಫ್ಲ್ಯಾಟ್‌ನಿಂದ ಕೊಳೆತ ವಾಸನೆ ಬರಲು ಆರಂಭವಾದಾಗ ಅನುಮಾನಗೊಂಡ ನೆರೆಹೊರೆಯ ಮಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪೊಲೀಸರು ಬಂದು ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಮೇಘಾಳ ಶವವನ್ನು ಪತ್ತೆಯಾಗಿದೆ. ಕಳೆದ ವಾರ ಆಕೆಯನ್ನು ಹತ್ಯೆಗೈದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮೇಘಾಳನ್ನು ಹತ್ಯೆ ಮಾಡುತ್ತಿದ್ದಂತೆ ಆರೋಪಿಯು ತನ್ನ ಸಹೋದರಿಗೆ ಮೆಸೇಜ್ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದಾನೆ. ಬಳಿಕ ಪರಾರಿಯಾಗ ಯತ್ನಿಸಿದ್ದಾನೆ. ಸದ್ಯ ಆರೋಪಿ ಹಾರ್ದಿಕ್ ಶಾನನ್ನು ಬಂಧಿಸಿರುವ ಪೊಲೀಸರು, ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net