ಪ್ರೇಯಸಿಯನ್ನು ಕೊಂದು ಆಕೆಯ ಫ್ರೆಂಡ್​ಗೆ ಕರೆ ಮಾಡಿ ಪ್ರಿಯಕರ ಹೇಳಿದ್ದು ಮಾತ್ರ ಶಾಕಿಂಗ್​ ವಿಚಾರ! Girlfriend

Girlfriend
Published on

Girlfriend : ಯುವಕನೊಬ್ಬ ತನ್ನ 17 ವರ್ಷದ ಗೆಳತಿಯನ್ನು ತನ್ನ ಬಾಡಿಗೆ ಮನೆಗೆ ಆಹ್ವಾನಿಸಿ, ಕತ್ತು ಸೀಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಸೋಮವಾರ (ಮಾರ್ಚ್ 10) ನಡೆದಿದೆ.

ಆರೋಪಿಯನ್ನು ಶಿವಂ ವರ್ಮ ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಬಳಿಕ ಸಂತ್ರಸ್ತೆಯ ಗೆಳತಿಗೆ ಕರೆ ಮಾಡಿ ನಿನ್ನ ಸ್ನೇಹಿತೆಯನ್ನು ಕೊಂದಿರುವುದಾಗಿ ಹೇಳಿದ್ದಾನೆ. ಆಕೆಗೆ ತನ್ನ ಸೌಂದರ್ಯದ ಬಗ್ಗೆ ಅಹಂ ಇತ್ತು ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದಿದ್ದಾನೆ. ಅಲ್ಲದೆ, ಸಂತ್ರಸ್ತೆಯ ತಂದೆಗೂ ಇದೇ ಮಾತನ್ನ ಆರೋಪಿ ಹೇಳಿದ್ದಾನೆ.

ಪೊಲೀಸರ ಪ್ರಕಾರ, ಸಂತ್ರಸ್ತೆ ಸೋಮವಾರ ಮಧ್ಯಾಹ್ನ ತನ್ನ ಸ್ನೇಹಿತೆಯೊಂದಿಗೆ ಮಾರುಕಟ್ಟೆಗೆ ಹೋಗಿದ್ದಳು. ಅಲ್ಲಿ ಆಕೆ ತನ್ನ ಗೆಳೆಯ ಶಿವಂ ವರ್ಮನನ್ನು ಭೇಟಿಯಾದಳು. ಬೈಕ್‌ನಲ್ಲಿ ಬಂದಿದ್ದ ಆತ ತನ್ನ ಪ್ರೇಯಸಿಯನ್ನು ತನ್ನ ಬಾಡಿಗೆ ಮನೆಗೆ ಆಹ್ವಾನಿಸಿದನು. ಸರಿ ಅಂತ ಸಂತ್ರಸ್ತೆ ಕೂಡ ಆತನೊಂದಿಗೆ ಹೋದಳು. ಇತ್ತ ಆಕೆಯ ಸ್ನೇಹಿತೆ ಮನೆಗೆ ಮರಳಿದಳು.

ಇದಾದ ಒಂದು ಗಂಟೆಯ ನಂತರ, ಶಿವಂ ವರ್ಮ ಸಂತ್ರಸ್ತೆಯ ಸ್ನೇಹಿತೆಗೆ ಕರೆ ಮಾಡಿ, ಅವಳು ನಂಬಿಕೆ ಇಲ್ಲದವಳು ಎಂದು ಆರೋಪಿಸಿ ತಕ್ಷಣವೇ ಕರೆ ಕಡಿತಗೊಳಿಸಿದ್ದಾನೆ. ಇದಾದ ಬಳಿಕ ಸಂತ್ರಸ್ತೆಯ ತಂದೆಗೆ ಕರೆ ಮಾಡಿ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ಇದರಿಂದ ಆಘಾತಕ್ಕೆ ಒಳಗಾದ ಆಕೆಯ ತಂದೆ ಘಟನಾ ಸ್ಥಳಕ್ಕೆ ಹೋದಾಗ ತನ್ನ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಪೊಲೀಸರಿಗೆ ಕರೆ ಮಾಡಿ ತಿಳಿಸಿದನು.

ಕೊಲೆ ಮಾಡಲು ಬಳಸಿದ ಚಾಕು ಅಪರಾಧ ಸ್ಥಳದಲ್ಲಿ ಪೊಲೀಸರಿಗೆ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲು ವಿರೋಧಿಸಿ ಆರಂಭದಲ್ಲಿ ಕುಟುಂಬ ಸದಸ್ಯರು ಪ್ರತಿಭಟಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಗಲಾಟೆಯ ನಂತರ, ಪೊಲೀಸರು ಅವರ ಮನವೊಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟರು.

ಆಜ್ ತಕ್ ಚಾನೆಲ್​ ಜೊತೆ ಮಾತನಾಡಿದ ಸಂತ್ರಸ್ತೆಯ ತಂದೆ, ಶಿವಂ ವರ್ಮಗೆ ಮನೆ ಬಾಡಿಗೆಗೆ ನೀಡಿದ ಮನೆ ಮಾಲೀಕರಿಗೆ ಆತನ ತಪ್ಪುಗಳ ಬಗ್ಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಶಿವಂ ವರ್ಮ ಹುಡುಗಿಯರನ್ನು ಆಗಾಗ ತನ್ನ ಕೋಣೆಗೆ ಕರೆತರುತ್ತಿದ್ದನು ಮತ್ತು ಮನೆ ಮಾಲೀಕರಿಗೂ ಅದು ತಿಳಿದಿತ್ತು. ನನ್ನ ಮಗಳಿಗೆ ನ್ಯಾಯ ಬೇಕು ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದ್ದಾರೆ.

ಮನೆ ಮಾಲೀಕರ ಮಗ ಸಂದೀಪ್ ಶರ್ಮ ಕೂಡ ಸಂತ್ರಸ್ತೆಯ ತಂದೆಯ ಮಾತನ್ನೇ ಪ್ರತಿಧ್ವನಿಸುತ್ತಾ, ಆರೋಪಿ ತನ್ನ ಕೋಣೆಗೆ ಹುಡುಗಿಯರನ್ನು ಕರೆತರುವ ಬಗ್ಗೆ ಪಾಲಕರಿಗೆ ಹಲವು ಬಾರಿ ತಿಳಿಸಿದ್ದೆ ಎಂದಿದ್ದಾರೆ. ವಿಧಿವಿಜ್ಞಾನ ತಂಡ ಎಲ್ಲವನ್ನು ಪರಿಶೀಲಿಸುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದಕ್ಷಿಣ ಡಿಸಿಪಿ ಆಶಿಶ್ ಶ್ರೀವಾಸ್ತವ ಆಜ್ ತಕ್‌ಗೆ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net