ಕ್ವಾರಂಟೈನ್​ ಕ್ಯಾಂಪ್​ ವಿಚಾರವಾಗಿ ಗ್ರಾಮಸ್ಥರ ನಡುವಿನ ಗಲಭೆಯಲ್ಲಿ ಓರ್ವ ವ್ಯಕ್ತಿಯ ಹತ್ಯೆ

Man killed
Published on

ಕೋಲ್ಕತ: ಕರೊನಾ ವೈರಸ್​ ಕ್ವಾರಂಟೈನ್​ ಶಿಬಿರ ಅಳವಡಿಸುವ ವಿಚಾರದಲ್ಲಿ ಉಂಟಾದ ಗಲಾಟೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬ ಹತ್ಯೆಯಾಗಿರುವ ಘಟನೆ ಪಶ್ಚಿಮ ಬಂಗಾಳದ ಬಿರ್ಭಮ್​ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

ಕೋಲ್ಕತದಿಂದ 180 ಕಿ.ಮೀ ದೂರವಿರುವ ಬಿರ್ಭಮ್​ ಜಿಲ್ಲೆಗೆ ಸೇರಿದ ತಲಿಬಪುರ್​ ಗ್ರಾಮದಲ್ಲಿ ಕ್ವಾರಂಟೈನ್ ಕ್ಯಾಂಪ್​ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದರು. ಆದರೆ, ಶಾಲೆಗೆ ಹೊಂದಿಕೊಂಡ ಹಾಸ್ಟೆಲ್​ನಲ್ಲಿ ಕ್ಯಾಂಪ್ ಅಳವಡಿಸಲು ಗ್ರಾಮದ ಒಂದು ಗುಂಪಿನ ಮಂದಿ ವಿರೋಧಿಸಿದರು. ಆದರೆ, ಮತ್ತೊಂದು ಗುಂಪು ಅಧಿಕಾರಿಗಳಿಗೆ ಬೆಂಬಲ ನೀಡಿದರು.

ಈ ವೇಳೆ ಎರಡು ಗುಂಪಿನ ನಡುವೆ ಗಲಭೆ ಉಂಟಾಗಿದೆ. ಒಬ್ಬರಿಗೊಬ್ಬರು ಸ್ಪೋಟಕಗಳನ್ನು ಎಸೆದಾಡಿದ್ದಾರೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಸೈಫುಲ್​ ಶೇಖ್​ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಮಾರ್ಗ ಮಧ್ಯೆಯೇ ಸಾವಿಗೀಡಾಗಿರುವುದಾಗಿ ವೈದ್ಯರು ತಿಳಿಸಿದರೆಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸದ್ಯ ಗ್ರಾಮದಲ್ಲಿ ಪರಿಸ್ಥಿತಿ ಉಲ್ಬಣಗೊಂಡಿದ್ದು, ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net