

ನವದೆಹಲಿ: ಮದುವೆಯಾದ ವ್ಯಕ್ತಿ ಸಂತೋಷಕರ ದಾಂಪತ್ಯ ಜೀವನ ನಡೆಸಬೇಕಾದರೆ, ತನ್ನ ಪತ್ನಿಯನ್ನು ನಿರ್ವಹಿಸುವ ಕಲೆಯನ್ನು ಕಲಿತಿರಬೇಕು. ಅದರಲ್ಲೂ ಪತ್ನಿ ಕೋಪದಲ್ಲಿದ್ದಾಗ ಆಕೆಯನ್ನು ನಿಭಾಯಿಸುವ ಜಾಣ್ಮೆ ಇರಬೇಕು. ಆದರೆ, ಈ ಕಲೆ ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ಅದು ಸಾಕಷ್ಟು ಸಮಯ ಮತ್ತು ಅನುಭವದ ಮೂಲಕ ಒಲಿಯುತ್ತದೆ.
ತಮ್ಮ ಪತ್ನಿಯರನ್ನು ನಿರ್ವಹಿಸುವುದರಲ್ಲಿ ಎಲ್ಲ ಗಂಡಂದಿರುವ ಮಾಸ್ಟರ್ಗಳೇನಲ್ಲ ಎಂಬುದು ಸತ್ಯವೇ. ಆದರೆ, ನಿಮ್ಮ ವೈವಾಹಿಕ ಜೀವನದಲ್ಲಿ ನೀವು ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ಬಯಸಿದರೆ, ಅದು ಸ್ವಯಂ ಕಲಿಕೆಯ ಪ್ರಕ್ರಿಯೆಯಾಗಿರುವುದರಿಂದ ನೀವೇ ಅದನ್ನು ಲೆಕ್ಕಾಚಾರ ಮಾಡಬೇಕು. ಪತ್ನಿಯ ಒಂದು ಕ್ಷಣದ ಬೇಸರ ಅಥವಾ ಕೋಪ ಇಡೀ ದಿನ ಪತಿಯನ್ನು ಹಸಿವಿನ ಸಂಕಷ್ಟಕ್ಕೆ ದೂಡಿಬಿಡುತ್ತದೆ.
ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿಯನ್ನು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿಗೆ ಹೋಲಿಕೆ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಪತ್ನಿ ತುಂಬಾ ಖುಷಿಯಾಗಿಬಿಡುತ್ತಾಳೆ ಅಂದುಕೊಂಡವನಿಗೆ ಆಗಿದ್ದೇ ಬೇರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಣ್ಣ ಎಡವಟ್ಟಿನಿಂದಾಗಿ ಪತಿರಾಯ ಹಸಿವಿನಿಂದ ಬಳಲಬೇಕಾಯಿತು. ಕ್ಷಮೆಯಾಚಿಸಿ, ತನ್ನ ಹೆಂಡತಿಯನ್ನು ಸಮಾಧಾನ ಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಊಟ ಕೊಡದೇ ಅಡುಗೆಮನೆಯಿಂದಲೇ ಗಂಡನನ್ನು ಪತ್ನಿ ಹೊರಹಾಕಿದಳು.
ವಿಡಿಯೋ ತುಣುಕನ್ನು ಪ್ರವೀಣ್ ಹೆಸರಿ ಟ್ವಿಟರ್ ಬಳಕೆದಾರ ಶೇರ್ ಮಾಡಿಕೊಂಡಿದ್ದು, ಗಂಡ ತನ್ನ ಪತ್ನಿಯನ್ನು ಕಿಯಾರಾ ಅಡ್ವಾಣಿ ಜೊತೆ ಹೋಲಿಕೆ ಮಾಡಿದಾಗ? ಎಂದು ಬರೆದುಕೊಂಡಿದ್ದಾರೆ.
52 ಸೆಕೆಂಡಿನ ವಿಡಿಯೋ ಅಡುಗೆ ಮನೆಯಲ್ಲಿ ಕೋಪದಿಂದ ಪತ್ನಿ ಅಡುಗೆ ಮಾಡುತ್ತಿರುವುದರೊಂದಿಗೆ ಆರಂಭವಾಗುತ್ತದೆ. ಪತ್ನಿಯನ್ನು ಪತಿ ಸಮಾಧಾನಪಡಿಸಲು ಮತ್ತು ಅವಳೊಂದಿಗೆ ಅರ್ಥಪೂರ್ಣವಾಗಿ ಮಾತನಾಡಲು ಪ್ರಯತ್ನಿಸುತ್ತಿರುವಾಗ ಅವಳು ಕೋಪದ ಮನಸ್ಥಿತಿಯಲ್ಲಿದ್ದಾಳೆ. ಕೋಪ ಮಾಡಿಕೊಳ್ಳಬೇಡ ಡಾರ್ಲಿಂಗ್, ನನ್ನನ್ನು ಕ್ಷಮಿಸು. ಅವಳೊಬ್ಬ ನಟಿ (ಕಿಯಾರಾ ಅಡ್ವಾಣಿ). ನಾನು ಅವಳನ್ನು ಮದುವೆಯಾಗುತ್ತೇನೆ ಅಂತಾ ನೀನು ಕೋಪಗೊಳ್ಳುತ್ತಿದ್ದೀಯಾ ಎಂದು ಪತಿ ಹೇಳುತ್ತಾನೆ.
ಇದಕ್ಕೆ ಉತ್ತರ ನೀಡುವ ಪತ್ನಿ, ಹೋಗಿ ಅವಳನ್ನೇ ಮದುವೆಯಾಗಿ, ನೀವು ಇಲ್ಲಿ ಇರಬೇಕಾಗಿಲ್ಲ ಎಂದು ಕೋಪದಿಂದ ಹೇಳುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ಗಂಡ, ಹೌದು, ಅವಳು ನನ್ನನ್ನು ಮದುವೆಯಾಗಲು ಸಾಯುತ್ತಿದ್ದಾಳೆ. ಅದಕ್ಕೆ ಉತ್ತರಿಸುವ ಪತ್ನಿ, ಇಲ್ಲ ಇಲ್ಲ ಅವಳು ನಿನ್ನನ್ನು ಮದುವೆಯಾಗುತ್ತಾಳೆ. ನಿನ್ನನ್ನು ಮದುವೆಯಾಗಲು ಎಲ್ಲ ಹುಡುಗಿಯರು ಸಾಯುತ್ತಾರೆ ಎಂದು ಹೇಳುತ್ತಾಳೆ.
ಓರ್ವ ನಟಿಯನ್ನಾಗಿ ಆಕೆಯನ್ನು ಇಷ್ಟಪಡುತ್ತೇನೆ. ನಾನು ಯಾವುದೇ ನಟಿಯನ್ನು ಇಷ್ಟಪಡಬಾರದೇ? ಎಂದು ಪತಿ ಪ್ರಶ್ನೆ ಮಾಡುತ್ತಾನೆ. ಇದಕ್ಕೆ ಉತ್ತರ ನೀಡುವ ಪತ್ನಿ, ನನ್ನನ್ನೇಕೆ ಕಿಯಾರಾ ಅಡ್ವಾಣಿ ಜೊತೆ ಹೋಲಿಗೆ ಮಾಡಿದ್ರಿ, ನಾನೇನು ನಟಿಯೇ? ಎಂದು ಮರು ಪ್ರಶ್ನೆ ಮಾಡುತ್ತಾಳೆ. ಇದಕ್ಕೆ ಉತ್ತರ ನೀಡುವ ಗಂಡ ಆಕೆ ಚೆನ್ನಾಗಿ ನಟನೆ ಮಾಡುತ್ತಾಳೆ ಎಂದು ಹೇಳಲು ಬಯಸಿದೆ ಎನ್ನುತ್ತಾನೆ. ಕೊನೆಯಲ್ಲಿ ಸಿಟ್ಟಿಗೇಳುವ ಪತ್ನಿ ಇಲ್ಲಿಂದ ಹೊರಗೆ ಹೋಗಿ, ನಿಮಗೆ ಇಂದು ಊಟ ಸಿಗುವುದಿಲ್ಲ ಎನ್ನುತ್ತಾಳೆ.
ಪತ್ನಿ ಮತ್ತು ಪತಿ ನಡುವಿನ ಈ ಕ್ಯೂಟ್ ಸಂಭಾಷಣೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಈವರೆಗೂ ವಿಡಿಯೋ 84 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಗಳಿಸಿದೆ. ವಿಡಿಯೋ ನೋಡಿದ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ಗಳನ್ನು ಹರಿಬಿಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)