ಮುಂದಿನ ತಿಂಗಳು ಮದುವೆ ಆಗಬೇಕಿದ್ದವ ತಂದೆಯ ತಿಥಿಯ ಬೆನ್ನಿಗೇ ಆತ್ಮಹತ್ಯೆ!

Kiran
Published on

ನೆಲಮಂಗಲ: ಇನ್ನೇನು ಒಂದು ತಿಂಗಳಲ್ಲಿ ಮದುವೆಯಾಗಬೇಕಿದ್ದ ಯುವಕನೊಬ್ಬ ತಂದೆಯ ತಿಥಿ ನಡೆದ ಮರುದಿನವೇ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಈ ಘಟನೆ ನಡೆದಿದೆ.

ನೆಲಮಂಗಲದ ಅರಿಶಿನಕುಂಟೆ ಗ್ರಾಮದ ಕಿರಣ್ (26) ಸಾವಿಗೀಡಾದ ಯುವಕ. ಈತ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದಾಗ್ಯೂ ಯುವಕನ ಸಾವಿನ ಕುರಿತು ಅನುಮಾನಗಳಿದ್ದು, ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ-ತಾಯಿಯರ ಅಗಲಿಕೆಯಿಂದ ಮನನೊಂದು ಖಿನ್ನತೆಗೊಳಗಾಗಿ ಈತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈತನ ತಾಯಿ ನಾಲ್ಕು ವರ್ಷಗಳ ಹಿಂದೆ ಸಾವಿಗೀಡಾಗಿದ್ದರು. ಈತನ ನಿಶ್ಚಿತಾರ್ಥ ನಡೆದ 15 ದಿನಕ್ಕೆ ತಂದೆ ಸಾವಿಗೀಡಾಗಿದ್ದರು. ಮುಂದಿನ ತಿಂಗಳು ಮದುವೆ ಎಂದು ನಿಶ್ಚಯಿಸಲಾಗಿತ್ತು. ನಿನ್ನೆಯಷ್ಟೇ ಕಿರಣ್ ತಂದೆಯ ತಿಥಿ ಕಾರ್ಯ ನಡೆದಿದೆ. ಆದರೆ ಅದರ ಬೆನ್ನಿಗೆ ಕಿರಣ್ ಕೂಡ ಸಾವಿಗೀಡಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net