

ಅಮರಾವತಿ: ಉಕ್ಕಿ ಹರಿಯುವ ಹೊಳೆಯ ನೀರಿನಲ್ಲಿ ಅಪಾಯವನ್ನೂ ಲೆಕ್ಕಿಸದೆ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬ ಬಾಣಂತಿ(Pregnant)ಯನ್ನು ಹೆಗಲ ಮೇಲೆ ಹೊತ್ತೊಯ್ದಿದ್ದು, ಮತ್ತಬ್ಬ ವ್ಯಕ್ತಿ ನವಜಾತ ಶಿಶುವನ್ನು ಅದೇ ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಎತ್ತಿಕೊಂಡು ಹೋಗಿರುವ ಮನಮಿಡಿಯುವ ಘಟನೆ ಶುಕ್ರವಾರ(ಸೆ.28) ಆಂಧ್ರದ ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಅಡ್ಡತೀಗಾಲ ಮಂಡಲದ ಪಿಂಜಾರ ಕೊಂಡ ತಾಂಡಾದಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಎಸ್‌ಆರ್ ಜಿಲ್ಲೆಯ ಎಲ್ಲ ಹೊಳೆಗಳು ಉಕ್ಕಿಹರಿಯುತ್ತಿವೆ. ಸಮರ್ಪಕ ರಸ್ತೆ, ಮೋರಿಗಳ ಕೊರತೆಯಿಂದ ಬಳಲುತ್ತಿರುವ ಗ್ರಾಮಗಳ ಜನರು ಅಪಾಯ ಲೆಕ್ಕಿಸದೆ ನೀರಿನಲ್ಲೇ ಮುಂದಕ್ಕೆ ಸಾಗುತ್ತಿದ್ದಾರೆ. ಅದೇ ರೀತಿ ಪಿಂಜಾರಕೊಂಡದ ಮಹಿಳೆ ಮತ್ತು ನವಜಾತ ಶಿಶುವನ್ನು ಇತರರು ಬ್ಯಾರೇಜ್ ಮೇಲೆ ಧುಮ್ಮಿಕ್ಕಿ ರಬಸವಾಗಿ ಹರಿಯುವ ನೀರಿನಲ್ಲಿ ಹೊತ್ತೊಯ್ಯುವ ದೃಶ್ಯ ಎದೆ ಝಲ್ ಎನಿಸುವಂತಿದೆ.
ದೇಶದ ನಾನಾಕಡೆ ರಸ್ತೆ ಸರಿಯಾಗಿ ಇಲ್ಲದಿದ್ದರೆ, ಸಾಮಾನ್ಯವಾಗಿ ಗರ್ಭಿಣಿ ಮತ್ತು ಅನಾರೋಗ್ಯ ಪೀಡಿತರನ್ನು ಡೋಲಿಗಳಲ್ಲಿ (ತಾತ್ಕಾಲಿಕ ಸ್ಟ್ರೆಚರ್‌ಗಳು) ಒಯ್ಯುತ್ತಾರೆ. ಆದರೆ, ಪಿಂಜಾರಕೊಂಡ ಗ್ರಾಮದ ಬುಡಕಟ್ಟು ಮಹಿಳೆ ವೆಲುಗುಳ ಜ್ಯೋತಿಕಾ ರೆಡ್ಡಿ ಮೂರು ದಿನಗಳ ಹಿಂದೆ ಕಾಕಿನಾಡ ಜಿಲ್ಲೆಯ ಯಲೇಶ್ವರಂ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಡಿಸ್ಚಾರ್ಜ್ ಆದ ನಂತರ, ಆಕೆಯ ಕುಟುಂಬ ಸದಸ್ಯರು ಉಕ್ಕಿ ಹರಿಯುವ ಹೊಳೆ ದಾಟುವುದನ್ನು ಬಿಟ್ಟು ಬೇರೆ ದಾರಿಯಿಲ್ಲದೆ, ಬ್ಯಾರೇಜ್ನ ಉದ್ದಕ್ಕೂ ರಭಸವಾಗಿ ಹರಿಯುವ ನೀರಿನಲ್ಲೇ ಹೋಗಿದ್ದಾರೆ.
ಹೊಳೆ ದಾಟುವಾಗ ನೀರಿನ ಮಟ್ಟ ಹಲವಾರು ಬಾರಿ ಏರಿದೆ. ಆದರೆ ತಾಯಿ ಮತ್ತು ಮಗುವನ್ನು ಹೊತ್ತೊಯ್ಯುವುದನ್ನು ಆ ವ್ಯಕ್ತಿಗಳು ನಿಲ್ಲಿಸಿಲ್ಲ. ಅವರ ಅಪಾಯಕಾರಿ ಪ್ರಯಾಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೆಟ್ಟಿಗರು ಬುಡಕಟ್ಟು ಜನರ ಸಮಸ್ಯೆಗೆ ಸರ್ಕಾರಗಳು ಇನ್ನಾದರೂ ಸ್ಪಂದಿಸಬೇಕಿದೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.