

ಗುವಾಹಟಿ: ಮಹಿಳೆಯೊಬ್ಬಳನ್ನು ಮಾಟಮಂತ್ರಕ್ಕೆ ಬಳಸಿಕೊಂಡು ಬಲಿ ಕೊಟ್ಟವನಿಗೆ ಅಂಥದ್ದೇ ಶಿಕ್ಷೆ ಸರಿ ಎಂದು ಗ್ರಾಮಸ್ಥರ ಸಭೆಯಲ್ಲಿ ನಿರ್ಣಯಿಸಿದ್ದಲ್ಲದೆ, ಆತನನ್ನು ಮರಕ್ಕೆ ಕಟ್ಟಿ ಜೀವಂತವಾಗಿ ಸುಟ್ಟು, ಕರಕಲಾದ ದೇಹವನ್ನು ಹೂತು ಹಾಕಿದ ಪ್ರಕರಣವೊಂದು ನಡೆದಿದೆ.
ಅಸ್ಸಾಮ್ನ ಗುವಾಹಟಿಯ ನಾಗಾವ್ ಜಿಲ್ಲೆಯ ಗ್ರಾಮವೊಂದರಲ್ಲಿ ಈ ಪ್ರಕರಣ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರು ಮಹಿಳೆಯರು ಸೇರಿದಂತೆ ಐವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ರಂಜಿತ್ ಬೊರ್ಡೊಲೊಯ್ (35) ಎಂಬಾತನನ್ನು ಸುಟ್ಟು ಕೊಂದಿದ್ದರು ಎಂದು ಎಸ್ಪಿ ಲೀನಾ ಡೊಲೆ ತಿಳಿಸಿದ್ದಾರೆ. ಈ ಪ್ರಕರಣವು ಸಮಗುರಿ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಹಂಪುರ್ ಬಮುನಿಯ ಬೊರ್ಲಲುಂಗಾವ್ ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ರಂಜಿತ್ 22 ವರ್ಷದ ಮಹಿಳೆಯನ್ನು ಮಾಟಕ್ಕೆ ಬಲಿ ಕೊಟ್ಟಿದ್ದ. ಈಕೆಯ ದೇಹ ಕೆಲವು ದಿನಗಳ ಹಿಂದೆ ಕೊಳವೊಂದರಲ್ಲಿ ಪತ್ತೆಯಾಗಿತ್ತು. ಈಕೆಯನ್ನು ರಂಜಿತ್ ಸೇರಿದಂತೆ ಐವರು ಕೊಂದಿದ್ದನ್ನು ನೋಡಿದ್ದಾಗಿ ಮಹಿಳೆಯೊಬ್ಬರು ತಿಳಿಸಿದ್ದಾರೆ. ಈ ಕುರಿತು ನಡೆದ ಗ್ರಾಮದ ಸಭೆಯಲ್ಲಿ ಆರೋಪಿ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದ. ಹೀಗಾಗಿ ಆರೋಪಿಯನ್ನೂ ಅದೇ ಥರ ಚಿತ್ರಹಿಂಸೆ ಕೊಟ್ಟು ಸಾಯಿಸಬೇಕು ಎಂದು ಗ್ರಾಮದ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಆ ನಂತರ ಜನರು ರಂಜಿತ್ ಮನೆಗೆ ನುಗ್ಗಿ ಆತನನ್ನು ಹೊರಗೆಳೆದುಕೊಂಡು ಬಂದು ಮರಕ್ಕೆ ಕಟ್ಟಿ ಹಾಕಿ ಬೆಂಕಿ ಹಚ್ಚಿದ್ದಾರೆ. ಸುಟ್ಟು ಸತ್ತು ಹೋಗಿ ಕರಕಲಾದ ಆತನ ಶವವನ್ನು ಹೂತು ಹಾಕಿದ್ದಾರೆ. ಬಳಿಕ ಪೊಲೀಸರು ಶವವನ್ನು ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ತನಿಖೆ ನಡೆಯುತ್ತಿದೆ. ಸದ್ಯ ಗ್ರಾಮದ ಬಹುತೇಕ ಮಂದಿ ಓಡಿ ಹೋಗಿದ್ದಾರೆ, ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.