ವಿಶಾಲ ಗಾಣಿಗ ಕೊಲೆ ಪ್ರಕರಣ: ಇನ್ನೊಬ್ಬ ಸುಪಾರಿ ಕಿಲ್ಲರ್ ಬಂಧನ..

Vishala Ganiga
ಆರೋಪಿ ಪತಿ ರಾಮಕೃಷ್ಣ, ಕೊಲೆಗೀಡಾದ ಪತ್ನಿ ವಿಶಾಲ ಗಾಣಿಗ.
Published on

ಉಡುಪಿ: ಕಳೆದ ವರ್ಷ ಇದೇ ತಿಂಗಳಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರದ ಉಪ್ಪಿನಕೋಟೆಯ ಕುಮ್ರಗೋಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ನಡೆದಿದ್ದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇನ್ನೊಬ್ಬ ಸುಪಾರಿ ಹಂತಕನನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರ ಮೂಲದ ಸೋನು ಅಲಿಯಾಸ್ ರೋಹಿತ್ ರಾಣಾಪ್ರತಾಪ್ ನಿಶಾದ್ (21) ಬಂಧಿತ ಸುಪಾರಿ ಹಂತಕ. ಸುಮಾರು ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಈತ ಉತ್ತರಪ್ರದೇಶದ ಗೋರಖ್​ಪುರದಲ್ಲಿರುವ ಕುರಿತು ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿ ಬಂಧಿಸಲಾಗಿದೆ. ಬ್ರಹ್ಮಾವರದ ಇನ್​ಸ್ಪೆಕ್ಟರ್ ಅನಂತಪದ್ಮನಾಭ ಅವರ ನೇತೃತ್ವದ ತಂಡ ಈ ಆರೋಪಿಯನ್ನು ಬಂಧಿಸಿದೆ.

ಮಿಲನ್ ರೆಸಿಡೆನ್ಸಿಯಲ್ಲಿ 2021ರ ಜುಲೈ 12ರಂದು ವಿಶಾಲ ಗಾಣಿಗ (35) ಕೊಲೆಯಾಗಿತ್ತು. ಕುತ್ತಿಗೆಗೆ ವೈರ್ ಬಿಗಿದ ಸ್ಥಿತಿಯಲ್ಲಿ ವಿಶಾಲ ಗಾಣಿಗ ಶವ ಅವರ ಅಪಾರ್ಟ್​ಮೆಂಟ್​ನಲ್ಲಿ ಕಂಡುಬಂದಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡಿದ್ದರು. ಪ್ರಕರಣ ಕ್ಲಿಷ್ಟವಾಗಿದ್ದರಿಂದ ಎಸ್​ಪಿ ವಿಷ್ಣುವರ್ಧನ್​ 3 ಠಾಣೆಗಳ ಪೊಲೀಸರನ್ನು ಒಳಗೊಂಡಂತೆ 4 ತಂಡಗಳನ್ನು ರಚಿಸಿದ್ದರು.

ಕೊಲೆ ಪ್ರಕರಣವನ್ನು 10 ದಿನಗಳೊಳಗೆ ಭೇದಿಸಿದ ಪೊಲೀಸರು, ದಂಪತಿ ನಡುವಣ ವೈಮನಸ್ಸೇ ಕೊಲೆಗೆ ಕಾರಣ ಎಂದು ಪತ್ತೆ ಹಚ್ಚಿದ್ದಲ್ಲದೆ ಪತಿಯೇ ಸುಪಾರಿ ಕೊಟ್ಟಿದ್ದನ್ನು ಕಂಡುಹಿಡಿದಿದ್ದರು. ನಂತರ ಪತಿ ರಾಮಕೃಷ್ಣ ಗಾಣಿಗ ಮತ್ತು ಸುಪಾರಿ ಕಿಲ್ಲರ್ ಉತ್ತರ ಪ್ರದೇಶದ ಸ್ವಾಮಿನಾಥ ನಿಶಾದ್ (38) ಎಂಬಾತನನ್ನು ಬಂಧಿಸಿದ್ದರು. ಆದರೆ ಇನ್ನೊಬ್ಬ ಸುಪಾರಿ ಹಂತಕ ರೋಹಿತ್ ರಾಣಾಪ್ರತಾಪ್ ನಿಶಾದ್ ಪರಾರಿಯಾಗಿ ತಲೆ ಮರೆಸಿಕೊಂಡಿದ್ದ. ಕಳೆದ ವರ್ಷದ ಜುಲೈನಿಂದ ತಲೆಮರೆಸಿಕೊಂಡಿದ್ದ ಈತ ಈ ವರ್ಷ ಅದೇ ತಿಂಗಳಲ್ಲಿ ಸಿಕ್ಕಿಬಿದ್ದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net