More

  ಸಿಎಂ, ಡಿಸಿಎಂ ನಿರ್ದೇಶನದಂತೆ ಪೊಲೀಸ್ ಇಲಾಖೆ ಕೆಲಸ: ಡಿ.ವಿ.ಸದಾನಂದಗೌಡ ಆಕ್ಷೇಪ

  ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನಿರ್ದೇಶನದಡಿ ಕೆಲಸ ಮಾಡುತ್ತಿದೆ ಎಂಬ ಭಾವನೆ ಸಾಮಾನ್ಯ ಜನರಲ್ಲಿ ಬಂದಿದೆ ಎಂದು ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆಕ್ಷೇಪಿಸಿದರು.

  ಬಿಜೆಪಿ ನಿಯೋಗದ ನೇತೃತ್ವವಹಿಸಿದ್ದ ಅವರು ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಡಿಜಿಪಿ ಅಲೋಕ್ ಮೋಹನ್ ಅವರಿಗೆ ಶನಿವಾರ  ಭೇಟಿಯಾಗಿ ಚರ್ಚಿಸಿತು. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು, ಇಲಾಖೆ ಕಾರ್ಯವೈಖರಿ ಬಗ್ಗೆ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

  ಕ್ರಿಮಿನಲ್‍ಗಳು ಹತ್ಯೆ ಮಾಡಿ ಬೇರೆಡೆ ಓಡಿ ಹೋಗಿ ಇನ್ನೊಬ್ಬರ ಮೇಲೆ ಹಲ್ಲೆ ನಡೆಸಿ ಸಾರ್ವಜನಿಕರು ಹಿಡಿದು ಕೊಡುವಂಥ ಪರಿಸ್ಥಿತಿ ಬಂದಿದೆ.ಮಹಿಳೆಯರು ವಾಕಿಂಗ್ ಹೋಗಲೂ ಭಯಪಡುವ ಪರಿಸ್ಥಿತಿ ಇದೆ. ಕಾನೂನು- ಸುವ್ಯವಸ್ಥೆ ಹದಗೆಟ್ಟ ಕುರಿತು ಪೊಲೀಸ್ ವರಿಷ್ಠರಿಗೆ ತಿಳಿಸಲಾಗಿದೆ ಎಂದರು.

  ರಾಜ್ಯದಲ್ಲಿ ಭಯಾನಕ ಅಪರಾಧಗಳ ಹೆಚ್ಚಳದ ಕುರಿತು ಗಮನ ಸೆಳೆಯಲಾಗಿದೆ. ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿರುವ ಆರೋಪಗಳಿದ್ದು, ಇದನ್ನು ತಪ್ಪಿಸಿ ಸ್ವತಂತ್ರವಾಗಿ ಕೆಲಸ ಮಾಡಲು ಕೋರಲಾಗಿದೆ ಎಂದು ಸದಾನಂದಗೌಡ ವಿವರಿಸಿದರು.

  ಕರ್ನಾಟಕ- ಅಪರಾಧಗಳ ರಾಜ್ಯ

  ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿರುವುದು ಮತ್ತು ಅಪರಾಧ ಪ್ರಮಾಣ ಹೆಚ್ಚಳದ ಕುರಿತು ಬಿಜೆಪಿ ನಿಯೋಗ  ಗಮನ ಸೆಳೆದು ತಕ್ಷಣ ಕ್ರಮವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.

  ರಾಜ್ಯದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವುದು ತಮಗೂ ತಿಳಿದಿದೆ. ಹಿಂದೆ ರಾಜ್ಯವು ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಉತ್ತಮ ಹೆಸರು ಪಡೆದಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೆ, ಇದೀಗ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕರ್ನಾಟಕವು ಈ ಮೂಲಕ “ಅಪರಾಧಗಳ ರಾಜ್ಯ” ಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಮನವಿ ಹೇಳಿದೆ.

  ಆರ್ಥಿಕ ಅಪರಾಧಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ, ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಶೇ 46ರಷ್ಟು ಹೆಚ್ಚಳ, ಹಿರಿಯ ನಾಗರೀಕರ ಮೇಲಿನ ಅಪರಾಧದಲ್ಲಿ ಶೇಕಡಾ 86ರಷ್ಟು ಹೆಚ್ಚಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಬಂದಿರುವುದು ಅತ್ಯಂತ ಬೇಸರದ ಮತ್ತು ಆತಂಕದ ವಿಚಾರ. ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

  ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವು ಕಾನೂನು-ಸುವ್ಯವಸ್ಥೆ ಕಡೆ ಗಮನ ಕೊಡುತ್ತಿಲ್ಲ. ಅಪರಾಧ ಪ್ರಮಾಣ ಹೆಚ್ಚಳದ ವಿಚಾರದಲ್ಲೂ ಅದು ಯಾವುದೇ ಕ್ರಮ ಕೈಗೊಂಡಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೋಲಿನ ಭೀತಿಯಿಂದ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿತ್ತು ಎಂದು ಆರೋಪಿಸಿದೆ.

  ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಕರಣ ದಾಖಲಿಸದೆ ಇರುವುದು, ಜೀವ ಬೆದರಿಕೆ ಹಾಕಿದರೂ ಕ್ರಮ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ವಿವರಿಸಲಾಗಿದೆ.

  ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ, ಕುಸಿದು ಅರಾಜಕತೆ ಸೃಷ್ಟಿ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಪೊಲೀಸ್  ಇಲಾಖೆ ಇದೆಯೋ ಇಲ್ಲವೋ ಎಂಬ ಸಂದೇಹ ಬರುತ್ತಿದ್ದು, ಜನಸಾಮಾನ್ಯರು ಇದೇ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ ಎಂದು ಹೇಳಿದೆ.

  ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಪದೇಪದೇ ಸಾಬೀತಾಗಿದೆ. ಪೊಲೀಸ್ ಇಲಾಖೆ ಇಂಥ ದುರ್ಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದರೂ ತಪ್ಪಾಗಲಾರದು.

  ಜನರ ಆಕ್ರೋಶ

  ಹುಬ್ಬಳ್ಳಿಯಲ್ಲಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠರ ಹತ್ಯೆ ಪ್ರಕರಣ, ಅಂಬಿಕಾ ಎಂಬ ಯುವತಿಯ ಹತ್ಯೆ ಸೇರಿದಂತೆ ಅನೇಕ ಮಹಿಳೆಯರ ಹತ್ಯೆ ನಡೆದಿದೆ. ಅಲ್ಲದೆ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು, ಪೊಲೀಸ್ ಇಲಾಖೆ ಕೂಡಲೇ ನಿಷ್ಪಕ್ಷಪಾತ ಕ್ರಮ ಕೈಗೊಂಡಿಲ್ಲ ಎಂಬ ಜನಾಕ್ರೋಶಕ್ಕೆ ಕಾರಣವಾಗಿದೆ.

  ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಮಾಣ, ಕಾನೂನು- ಸುವ್ಯವಸ್ಥೆ ಕುಸಿತವನ್ನು ಗಮನಿಸಿ ಪೊಲೀಸ್ ಇಲಾಖೆಗೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತರಾಗಬೇಕೆಂದು ಬಿಜೆಪಿ ನಿಯೋಗ ಒತ್ತಾಯಿಸುತ್ತದೆ.

  ಕೂಡಲೇ ಉನ್ನತಾಧಿಕಾರಿಗಳ ಸಭೆ ಕರೆದು ಸೂಕ್ತ ನಿರ್ದೇಶನ ನೀಡಿ ಕಾನೂನು ಮತ್ತು ಸುವ್ಯವಸ್ಥೆಗೆ ರಾಜ್ಯ ಮಾದರಿ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಎಂದು ಮುಖಂಡರು ತಿಳಿಸಿದ್ದಾರೆ.

  ನಿಯೋಗದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ಮಾಳವಿಕ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಇನ್ನಿತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts