

ನವದೆಹಲಿ: ಕುರಾನ್ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಜನರ ಗುಂಪೊಂದು ವ್ಯಕ್ತಿಯೋರ್ವನನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸ್ವಾಟ್ ಜಿಲ್ಲೆಯಲ್ಲಿ ನಡಿದಿದೆ. ಜನರ ಗುಂಪು ವ್ಯಕ್ತಿಯನ್ನು ಥಳಿಸಿ ಆತನನ್ನು ಸುಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಮೃತ ವ್ಯಕ್ತಿಯು ಸಿಯಾಲ್ಕೋಟ್ನ ನಿವಾಸಿಯಾಗಿದ್ದು, ಈತ ಕುರಾನ್ನ ಕೆಲವು ಪುಟಗಳನ್ನು ಹರಿದು ಸುಟ್ಟು ಹಾಕಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಪೊಲೀಸ್ ಠಾಣೆಯ ಮುಂದೆಯೇ ಹತ್ಯೆ ಮಾಡಿ ಸುಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ, ಮೃತನು ಸಿಯಾಲ್ಕೋಟ್ ನಿವಾಸಿ ಎಂದು ತಿಳಿದು ಬಂದಿದ್ದು, ಈತ ಕುರಾನ್ನ ಕೆಲವು ಪುಟಗಳನ್ನು ಹರಿದು ಬೆಂಕಿ ಹಚ್ಚಿದ್ದ ಎಂದು ತಿಳಿದು ಬಂದಿದೆ. ಖಚಿತ ಮಾಹಿತಿ ಆಧರಿಸಿ ನಾವು ಆತನನ್ನು ಬಂಧಿಸಿ ಠಾಣೆಯಲ್ಲಿ ಇರಿಸಿದ್ದೆವು. ಆತನ ಬಂಧನದ ಬೆನ್ನಲ್ಲೇ ಕುರಾನ್ಗೆ ಅವಮಾನ ಮಾಡಲಾಗಿದೆ ಎಂಬ ಸುದ್ದಿ ಜನರಲ್ಲಿ ಹರಡಿದ ತಕ್ಷಣ ಅವರು ಪೊಲೀಸ್ ಠಾಣೆಗೆ ಆಗಮಿಸಿ ಸೆಲ್ನಲ್ಲಿದ್ದ ವ್ಯಕ್ತಿಯನ್ನು ಎಳೆದುತಂದು ಹತ್ಯೆ ಮಾಡಿ ಬಳಿಕ ಆತನ ಶವಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಗುಂಪನ್ನು ಚದುರಿಸಲು ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಇದರ ಹೊರತಾಗಿಯೂ ಗುಂಪು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದು, ಠಾಣೆಯೊಳಗಿದ್ದ ವ್ಯಕ್ತಿಯನ್ನು ಹೊರಗೆ ಎಳೆತಂದು ಹತ್ಯೆ ಮಾಡಿ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ಜನರ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಜಹಿದುಲ್ಲಾ ತಿಳಿಸಿದ್ದಾರೆ.