

ಮುಂಬೈ: ದೇಶದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಖೇಶ್ ಅಂಬಾನಿ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ತೆಲಂಗಾಣದ 19 ವರ್ಷದ ಯುವಕನನ್ನು ಶನಿವಾರ ಬಂಧಿಸಲಾಗಿದೆ.
ಇದನ್ನೂ ಓದಿ:
ಮುಖೇಶ್ ಅಂಬಾನಿ ಅವರಿಗೆ ಕಳೆದ ವಾರ ಇ-ಮೇಲ್ ಮೂಲಕ ಮೂರು ಬೆದರಿಕೆ ಬಂದಿದ್ದು, ಪ್ರತಿಯೊಂದೂ ಭಾರಿ ಮೊತ್ತದ ಹಣಕ್ಕೆ ಬೇಡಿಕೆಯಿಡಲಾಗಿತ್ತು.
ಆರೋಪಿಯನ್ನು ಗಣೇಶ್ ರಮೇಶ್ ವನಪರ್ಡಿ ಎಂದು ಗುರುತಿಸಲಾಗಿದ್ದು, ನವೆಂಬರ್ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಶುಕ್ರವಾರ ಅಪರಿಚಿತ ವ್ಯಕ್ತಿಯಿಂದ 20 ಕೋಟಿ ರೂ. ಮೊತ್ತಕ್ಕೆ ಒತ್ತಾಯಿಸಿ ಮೊದಲ ಇ-ಮೇಲ್ ಬಂದಿತ್ತು. ಹಣ ಪಾವತಿಸಬೇಕು, ಇಲ್ಲವಾದರೆ ಕೊಲ್ಲಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ನಂತರ ಮುಖೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ನೀಡಿದ ದೂರಿನ ಆಧಾರದ ಮೇಲೆ ಅಕ್ಟೋಬರ್ 27 ರಂದು ಮುಂಬೈನಲ್ಲಿ ದೂರು ದಾಖಲಿಸಲಾಗಿದೆ.
2ದಿನಗಳ ನಂತರ 200 ಕೋಟಿ ರೂ.ಗೆ ಬೇಡಿಕೆಯ ಮತ್ತೊಂದು ಇ-ಮೇಲ್ ಕಂಪನಿಗೆ ಬಂದಿತ್ತು. ಶನಿವಾರ ಮೂರನೇ ಬಾರಿಗೆ 400 ಕೋಟಿ ನೀಡದಿದ್ದರೆ ಅಂಬಾನಿ ಅವರನ್ನು ಸಾಯಿಸುವುದಾಗಿ ಬೆದರಿಕೆ ಹಾಕಲಾಗಿತ್ತು.
ಈ ಮೇಲ್ ಐಡಿ ಶಾದಾಬ್ ಖಾನ್ ಎಂಬ ವ್ಯಕ್ತಿಗೆ ಸೇರಿದ್ದು, ಬೆಲ್ಜಿಯಂನಿಂದ ಮೇಲ್‌ಗಳು ಬಂದಿವೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಇದು ವ್ಯಕ್ತಿಯ ಸರಿಯಾದ ಐಡಿಯೇ ಅಥವಾ ನಕಲಿ ಐಡಿ ಬಳಸಿ ಈ ಮೇಲ್‌ಗಳನ್ನು ಕಳುಹಿಸಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.