

ಜೈಪುರ: ಹೈಡ್ರೋಫೋಬಿಯಾದಿಂದ ಬಳಲುತ್ತಿರುವ 24 ವರ್ಷದ ಯುವಕನೋರ್ವ ಮಹಿಳೆಯನ್ನು ಕೊಂದು ಆಕೆಯ ದೇಹದ ಮಾಂಸವನ್ನು ತಿಂದಿರುವ ವಿಲಕ್ಷಣ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಶಾಂತಿ ದೇವಿ(35) ಎಂದು ಗುರುತಿಸಲಾಗಿದ್ದು ಬಂಧಿತ ಆರೋಪಿಯನ್ನು ಮುಂಬೈ ಮೂಲದ ಸುರೇಂದ್ರ ಠಾಕೂರ್(24) ಎಂದು ಗುರತಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವೈದ್ಯರು ಆರೋಪಿಯೂ ಹೈಡ್ರೋಫೋಬಿಯಾದಿಂದ ಬಳಲುತ್ತಿದ್ದು ನೀರಿನ ಕೊನೆಯ ಹಂತದ ರೇಬೀಸ್ ಸೋಂಕಿನಿಂದ ಉಂಟಾಗುವ ನೀರಿನ ಭಯದಿಂದ ಬಳಲುತ್ತಿದ್ದಾರೆ. ಈ ಹಿಂದೆ ಅವರಿಗೆ ಕಜ್ಜಿ ಹಿಡಿದಿರುವ ನಾಯಿ ಕಚ್ಚಿದ ಸಮಯದಲ್ಲಿ ಅವರು ಸರಿಯಾದ ಚಿಕಿತ್ಸೆ ಪಡೆಯದ ಪರಿಣಾಮ ಈಗಾಗಿರಬಹುದು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರತ್ಯಕ್ಷದರ್ಶಿ ಒಬ್ಬರು ಪಾಲಿ ಜಿಲ್ಲೆಯ ಸರಧಾನ ಗ್ರಾಮದಲ್ಲಿ ದನ ಮೇಯಿಸುತ್ತಿದ್ದ ಮಹಿಳೆ ಶಾಂತಿ ದೇವಿ ಅವರ ಮೇಲೆ ಆರೋಪಿಯೂ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಅವರ ದೇಹವನ್ನು ಕಲ್ಲಿನಿಂದ ಜಜ್ಜಿ ಮಾಂಸವನ್ನು ಸೇವಿಸಿದ್ದಾನೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಶಾಂತಿ ದೇವಿ ಪುತ್ರ ಬಿರೇನ್ ಕಥತ್ ನಾನು ಕುರಿಗಳನ್ನು ಮೇಯಿಸಿ ಹಿಂತಿರುಗುತ್ತಿದ್ದ ವೇಳೆ ಆರೋಪಿಯೂ ಕಲ್ಲಿನಿಂದ ಜಜ್ಜಿ ನನ್ನ ತಾಯಿ ದೇಹದ ಮಾಂಸವನ್ನು ತಿನ್ನುತ್ತಿದ್ದ. ಇದನ್ನು ನೋಡಿ ನಾನು ಭಯದಿಂದ ಓಡಿ ಹೋಗಿ ಪೊಲೀಸರಿಗೆ ವಿಷಯ ಮುಟ್ಟಿಸಿದೆ ಎಂದು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಉಪ ಪೊಲೀಸ್ ಅಧೀಕ್ಷಕ ಸುಖರಾಮ್ ಬಿಷ್ಣೋಯ್ ಬಂಧಿತ ಆರೋಪಿ ಮಾನಸಿಕ ಅಸ್ವಸ್ಥನಂತೆ ಹಾಗೂ ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾನೆ. ಚಿಕಿತ್ಸೆಗಾಗಿ ದಾಖಲಿಸಿರುವ ಆಸ್ಪತ್ರೆಯಲ್ಲೂ ಸಹ ದೊಡ್ಡ ಗಲಾಟೆಯನ್ನು ಮಾಡಿದ. ಆತನ ಕೈ-ಕಾಲುಗಳನ್ನು ಕಟ್ಟಿ ಹಾಕಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.