

ಬೆಂಗಳೂರು: ಕೆಲ ದಿನಗಳ ಹಿಂದೆ ಬಾಯ್ಫ್ರೆಂಡ್ನಿಂದಲೇ ಹತ್ಯೆಯಾಗಿದ್ದ ಅಸ್ಸಾಂ ಮೂಲದ ವ್ಲಾಗರ್ ಯುವತಿ (Vlogger Girlfriend) ಮಾಯಾ ಗೊಗೊಯ್ ಹಯ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಆರವ್ ಹನೋಯ್ನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಬಂಧಿಸಿದ್ದಾರೆ.
ನವೆಂಬರ್ 23ರಂದು ಇಂದಿರಾನಗರದ ಸರ್ವೀಸ್ ಅಪಾರ್ಟ್ಮೆಂಟ್ನಲ್ಲಿ ಅಸ್ಸಾಂ ಮೂಲದ ಯುವತಿ ಮಾಯಾ ಗೊಗೊಯ್ನನ್ನು ಆಕೆಯ ಪ್ರಿಯಕರ ಆರವ್ ಬರ್ಬರವಾಗಿ ಹತ್ಯೆ ಮಾಡಿದ್ದ. ಎರಡು ದಿನಗಳ ಕಾಲ ಶವದ ಜೊತೆ ಇದ್ದ ಆರೋಪಿ ನವೆಂಬರ್ 26ರಂದು ಎಸ್ಕೇಪ್ ಆಗಿದ್ದ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಇಂದಿರಾನಗರ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಆರೋಪಿಯನ್ನು ಪತ್ತೆಹಚ್ಚಲು ಎರಡು ತಂಡಗಳನ್ನು ರಚಿಸಿದ್ದರು.
ಈ ಬಗ್ಗೆ ಮಾತನಾಡಿರುವ ಪೂರ್ವ ವಿಭಾಗದ ಡಿಸಿಪಿ ದೇವರಾಜ್, ಕೊಲೆ ಮಾಡಿದ ನಂತರ, ಆರವ್ ಮೊದಲು ಉತ್ತರ ಕರ್ನಾಟಕದ ರಾಯಚೂರಿಗೆ ಹೋಗಿದ್ದ. ಆ ಬಳಿಕ ಆತ ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ವಾರಣಾಸಿಯಲ್ಲಿ ತಲೆಮಾರಿಸಿಕೊಂಡಿದ್ದ. ಆರೋಪಿಯನ್ನು ಪತ್ತೆಹಚ್ಚಲು ಕೇರಳಕ್ಕೂ ಒಂದು ತಂಡವನ್ನು ಕಳುಹಿಸಲಾಗಿತ್ತು. ಆತ ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಧಿಕಾರಿಗಳು ಕೂಡಲೇ ಆತನನ್ನು ಬಂಧಿಸಿದ್ದಾರೆ.
ಆರೋಪಿ ಕೊಲೆ ಮಾಡುವ ಉದ್ದೇಶದಿಂದಲೇ ಮಾಯಾಳನ್ನು ಸರ್ವೀಸ್ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿದ್ದು, ಹಗ್ಗ ಹಾಗೂ ಚಾಕುವನ್ನು ತರಿಸಿಕೊಂಡಿದ್ದ. ಇವರಿಬ್ಬರು ಬೊಂಬಲ್ ಎಂಬುವ ಆ್ಯಪ್ನಿಂದ ಪರಿಚಯವಾಗಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದರ ಬಗ್ಗೆ ವಿಚಾರಣೆ ನಡೆಯುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.