2000-2012, ಹಾಟ್​ ಬ್ಯೂಟಿ ಈಗ ಸನ್ಯಾಸಿನಿ! ಮಮತಾ ಕುಲಕರ್ಣಿ ಆಸ್ತಿ ಮೌಲ್ಯ ಕೇಳಿದ್ರೆ ಹುಬ್ಬೇರೋದು ಖಚಿತ | Mamta Kulkarni

ವಿಜಯವಾಣಿ - 2025-01-25T131945.476
Published on

Mamta Kulkarni: 90ರ ದಶಕದಲ್ಲಿ ಬಾಲಿವುಡ್​ ಅಂಗಳದಲ್ಲಿ ಮಿಂಚಿ ಕಣ್ಮರೆಯಾದ ಹಾಟ್​ ಬ್ಯೂಟಿ ಮಮತಾ ಕುಲಕರ್ಣಿ (52), 25 ವರ್ಷಗಳ ನಂತರ ಭಾರತಕ್ಕೆ ಮರಳಿದ್ದಾರೆ. ಅದು ಚಿತ್ರರಂಗದ ಯಾವುದೇ ಕೆಲಸಕ್ಕಾಗಿ ಅಥವಾ ಉದ್ಯಮಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸನ್ಯಾಸತ್ವ ಸ್ವೀಕರಿಸಲು ಎಂಬ ಸಂಗತಿ ಸದ್ಯ ಹಲವರನ್ನು ಅಚ್ಚರಿಗೆ ದೂಡಿದೆ.

ಒಂದು ಕಾಲದಲ್ಲಿ ಪಡ್ಡೆ ಹುಡುಗರ ನಿದ್ದೆಗಡಿಸಿದ್ದ ಹಾಟ್​ ಬ್ಯೂಟಿ, ಕಳೆದ 25 ವರ್ಷಗಳಿಂದ ಆಧ್ಯಾತ್ಮದತ್ತ ಒಲವು ತೋರಿದ್ದಾರೆ. ತಮ್ಮ ಗುರುಗಳ ಸಲಹೆಯ ಮೇರೆಗೆ ತಪಸ್ಸಿಗೆ ಜಾರಿದ ನಟಿ, 2025ರಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ ಭಾಗಿಯಾಗಬೇಕು ಎಂದು ನಿರ್ಧರಿಸಿ ಈಗ ಭಾರತಕ್ಕೆ ಮರಳಿದ್ದಾರೆ. ನಿನ್ನೆ (ಜ.24) ಕುಂಭಮೇಳದಲ್ಲಿ ಸನ್ಯಾಸತ್ವ ಸ್ವೀಕಾರ ಮಾಡಿದ ಮಮತಾ ಕುಲಕರ್ಣಿ, ಶುಕ್ರವಾರ ಮಹಾ ಕಾಳಿಯ ದಿನ ಎಂದೇ ಸನ್ಯಾಸತ್ವ ಪಡೆದುಕೊಂಡಿದ್ದಾರೆ.

ಅಂದು ಬಾಲಿವುಡ್​ನಲ್ಲಿ ತಮ್ಮ ನಟನಾ ಶೈಲಿ, ಕಣ್ಣು ಕುಕ್ಕುವ ಮಿಂಚಿನ ನೋಟದಿಂದಲೇ ಖ್ಯಾತಿ ಗಳಿಸಿದ್ದ ಮಮತಾ, ನಟಿಸಿದ ಚಿತ್ರಗಳಿಗಿಂತಲೂ ವಿವಾದಗಳ ಮೂಲಕವೇ ಸಖತ್ ಸದ್ದು ಮಾಡಿದರು. 2016ರಲ್ಲಿ, ಥಾಣೆ ಪೊಲೀಸರು ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಮಮತಾ ಕುಲಕರ್ಣಿಯನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದರು. ಇದು 2 ಸಾವಿರ ಕೋಟಿ ರೂ. ಅಂತರರಾಷ್ಟ್ರೀಯ ಮಾದಕವಸ್ತು ಜಾಲಕ್ಕೆ ಪೂರೈಸುವ ಡ್ರಗ್​ ಆರೋಪವಾಗಿತ್ತು. ವಿವಾದ, ಆರೋಪಗಳ ಬೆನ್ನಲ್ಲೇ ಅಂದು ಭಾರತ ತೊರೆದ ಮಮತಾ, ಸನ್ಯಾಸತ್ವ ಸ್ವೀಕರಿಸುವ ಉದ್ದೇಶದಿಂದ ಈಗ ಮತ್ತೆ ಭಾರತಕ್ಕೆ ಮರಳಿರುವುದು ಬಿಟೌನ್ ಮಂದಿಯನ್ನು ಅಕ್ಷರಶಃ ನಿಬ್ಬರಗಾಗಿಸಿದೆ.

ಸನ್ಯಾಸತ್ವ ಏಕೆ?

"ಭಾರತ ತೊರೆಯಲು ಕಾರಣ ಆಧ್ಯಾತ್ಮ. 1996ರಲ್ಲಿ, ನಾನು ಆಧ್ಯಾತ್ಮದತ್ತ ಆಕರ್ಷಿತಳಾದೆ. ಮತ್ತು ಆ ಸಮಯದಲ್ಲಿ ನಾನು ಗುರು ಗಗನ್ ಗಿರಿ ಮಹಾರಾಜರನ್ನು ಭೇಟಿ ಮಾಡಿದೆ. ಅವರ ಪ್ರಭಾವವೇ ನನ್ನನ್ನು ಆಧ್ಯಾತ್ಮಿಕದತ್ತ ದೂಡಿತು. ಇದೇ ಕಾರಣಕ್ಕೆ ನಾನು 2000ದಲ್ಲಿ ಚಿತ್ರರಂಗ ತೊರೆದು ತಪಸ್ಸನ್ನು ಪ್ರಾರಂಭಿಸಿದೆ. ಬಾಲಿವುಡ್ ನನಗೆ ಹೆಸರು ಮತ್ತು ಖ್ಯಾತಿ ಎರಡನ್ನೂ ನೀಡಿದೆ. ಆದರೆ, ನಾನು ದೂರ ಸರಿಯಲು ನಿರ್ಧರಿಸಿದ್ದು, ಆಧ್ಯಾತ್ಮದಿಂದ ಮಾತ್ರ. 2000ದಿಂದ 2012ರವರೆಗೆ ನಾನು ನನ್ನ ತಪಸ್ಸಿನ ಮೇಲೆ ಮಾತ್ರ ಗಮನಹರಿಸಿದೆ. ದುಬೈನಲ್ಲಿ 2 ಬಿಎಚ್​ಕೆ ಫ್ಲಾಟ್‌ನಲ್ಲಿ ಸರಳ ಜೀವನವನ್ನು ನಡೆಸುತ್ತಿದ್ದೆ ಮತ್ತು 12 ವರ್ಷಗಳ ಕಾಲ ಬ್ರಹ್ಮಚರ್ಯೆಯನ್ನು ಉಳಿಸಿಕೊಂಡೆ" ಎಂದು ಮಮತಾ ಹೇಳಿದ್ದಾರೆ.

ಆಸ್ತಿ ಮೌಲ್ಯ

ವರದಿಗಳ ಪ್ರಕಾರ, ಹಲವು ವರ್ಷಗಳಿಂದ ಸಾರ್ವಜನಿಕರ ಗಮನದಿಂದ ದೂರ ಉಳಿದಿರುವ ನಟಿ ಮಮತಾ ಕುಲಕರ್ಣಿಯ ಒಟ್ಟು ಆಸ್ತಿ ಮೌಲ್ಯ 10 ಮಿಲಿಯನ್ ಡಾಲರ್ (85 ಕೋಟಿ ರೂ.) ಎಂದು ಹೇಳಲಾಗಿದೆ. ಒಟ್ಟಾರೆ 90ರ ದಶಕರದಲ್ಲಿ ಚಿತ್ರರಸಿಕರ ಮನಗೆದ್ದ ನಟಿ ಇಂದು ಸನ್ಯಾಸತ್ವ ತೆಗೆದುಕೊಂಡಿರುವುದು ಅವರ ಅಭಿಮಾನಿಗಳು ಸೇರಿದಂತೆ ಹಲವರನ್ನು ಅಚ್ಚರಿಗೆ ದೂಡಿರುವುದರಲ್ಲಿ ಅನುಮಾನವೇ ಇಲ್ಲ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net