

ಕೋಲ್ಕತ್ತ: ಕರೊನಾ ವೈರಸ್ನಿಂದ ಪಾರಾಗಲು ಸಾಮಾಜಿಕ ಅಂತರ (ಸೋಷಿಯಲ್ ಡಿಸ್ಟನ್ಸ್)ವೊಂದೇ ಸದ್ಯದ ಮಾರ್ಗ. ಹೀಗಿದ್ದರೂ ಅದು ತುಂಬ ಜನರಿಗೆ ಅರ್ಥವಾಗುತ್ತಿಲ್ಲ. ಯಾರೂ ಅಂತರ ಕಾಯ್ದುಕೊಳ್ಳುತ್ತಿಲ್ಲ.
ಆದರೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತುಂಬ ಅಲರ್ಟ್ ಆಗಿದ್ದಾರೆ. ತಾವೇ ಮಾರ್ಕೆಟ್ಗೆ ತೆರಳಿ, ಅಲ್ಲಿನ ಅಂಗಡಿಯವರಿಗೆ ಸೋಷಿಯಲ್ ಡಿಸ್ಟನ್ಸ್ ಪಾಠ ಹೇಳುತ್ತಿದ್ದಾರೆ.
ಮೂಗು, ಬಾಯಿಗೆ ಬಟ್ಟೆಯನ್ನು ಮಾಸ್ಕ್ನಂತೆ ಕಟ್ಟಿಕೊಂಡು, ಅಧಿಕಾರಿಗಳೊಂದಿಗೆ ಕೋಲ್ಕತ್ತ ಮಾರ್ಕೆಟ್ಗೆ ತೆರಳಿದ ದೀದಿ, ಅಲ್ಲಿನ ತರಕಾರಿ ವ್ಯಾಪಾರಿಗಳು ಸೇರಿ, ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವವರಿಗೆ ಗ್ರಾಹಕರಿಂದ ಅಂತರ ಕಾಯ್ದುಕೊಳ್ಳಿ ಎಂದಿದ್ದಾರೆ. ಅಲ್ಲದೆ, ಸ್ವತಃ ತಾವೇ ಇಟ್ಟಿಗೆಯಿಂದ ಕೆಲವು ಅಂಗಡಿಗಳ ಎದುರು ವೃತ್ತಾಕಾರದ ಗುರುತು ಹಾಕಿದ್ದಾರೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಹೋಗುವವರು ಅದೇ ವೃತ್ತದಲ್ಲಿ ನಿಂತು ಅಂಗಡಿ ಮಾಲೀಕರೊಂದಿಗೆ ವ್ಯವಹರಿಸಬೇಕು. ತಮಗೆ ಬೇಕಾದ ತರಕಾರಿ, ಹೂವುಗಳನ್ನು ಕೊಂಡುಕೊಳ್ಳಬೇಕು ಎಂದು ಮಮತಾ ಬ್ಯಾನರ್ಜಿ ಖಡಕ್ ಸೂಚನೆ ನೀಡಿದ್ದಾರೆ. ಯಾವುದೇ ಶಾಪ್ ಎದುರು ಸರತಿ ಸಾಲಿನಲ್ಲಿ ದೂರದೂರ ನಿಲ್ಲಬೇಕು. ಗುಂಪು ಕಟ್ಟಬಾರದು ಎಂದು ಹೇಳಿದ್ದಾರೆ. ರಸ್ತೆ ಮೇಲೆ ಅವರೇ ವೃತ್ತಾಕಾರದ ಗುರುತು ಹಾಕುವುದನ್ನು ವಿಡಿಯೋದಲ್ಲಿ ನೋಡಬಹುದು.
ಪಶ್ಚಿಮಬಂಗಾಳದಲ್ಲೂ ಕೂಡ ಅನೇಕ ಜನರು ಸಾಮಾಜಿಕ ಅಂತರ ನಿಯಮವನ್ನು ಮೀರುತ್ತಿದ್ದಾರೆ ಎಂದು ವರದಿಯಾಗಿತ್ತು. ಲಾಕ್ಡೌನ್ ಆಗಿದ್ದರಿಂದ ಅಗತ್ಯವಸ್ತುಗಳು ಸಿಗುವುದಿಲ್ಲ. ಹಾಗಾಗಿ ಈಗಲೇ ಎಷ್ಟಾಗತ್ತೋ ಅಷ್ಟು ಖರೀದಿ ಮಾಡಬೇಕು ಎಂದು ಹೆಚ್ಚಿನ ಜನರು ಬೀದಿಗೆ ಇಳಿಯುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದಿದ್ದವು. ಹಾಗಾಗಿ ಸ್ವತಃ ಮಮತಾ ಬ್ಯಾನರ್ಜಿಯವೇ ಫೀಲ್ಡ್ಗೆ ಇಳಿದಿದ್ದಾರೆ.
ಅಷ್ಟೇ ಅಲ್ಲ ಮಮತಾ ಬ್ಯಾನರ್ಜಿಯವರು 18 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಯಾವ್ಯಾವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದ ಜನರು ಇದ್ದಾರೋ ಅವರಿಗೆಲ್ಲ ಅಗತ್ಯ ವಸ್ತುಗಳನ್ನು ಪೂರೈಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕರೊನಾ ವೈರಸ್ ಪ್ರಮಾಣ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಾವಿನ ಸಂಖ್ಯೆಯೂ ಏರುತ್ತಿದೆ. ಲಾಕ್ಡೌನ್ ಇದ್ದರೂ ಅದನ್ನು ಮೀರುತ್ತಿರುವವರನ್ನು ನಿಯಂತ್ರಿಸುವುದೂ ಕಷ್ಟವಾಗಿದೆ. (ಏಜೆನ್ಸೀಸ್)