ಕಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಆಕ್ರೋಶ ಹುಟ್ಟುಹಾಕಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಚುರುಕುಗೊಳಿಸಿದ್ದು, ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ಸಹೋದ್ಯೋಗಿಯ ಹತ್ಯೆ ಖಂಡಿಸಿ ಪಶ್ಚಿಮ ಬಂಗಾಳದಲ್ಲಿ ವೈದ್ಯರು ಪ್ರತಿಭಟನೆಯನ್ನು ಮುಂದುವರೆಸಿದ್ದು, ಸಿಎಂ ಕರೆದಿದ್ದ ಸಭೆಯನ್ನು ಧಿಕ್ಕರಿಸಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರತಿಭಟನಾ ನಿರತ ವೈದ್ಯರನ್ನು ಉದ್ಧೇಶಿಸಿ ವರ್ಚುವಲ್ ಮೀಟಿಂಗ್ ಮೂಲಕ ಸಭೆ ನಡೆಸಲು ಮುಂದಾಗಿದ್ದರು. ಆದರೆ, ವೈದ್ಯರು ಸಭೆಯಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿದ ನಂತರ ಮಾತನಾಡಿದ ದೀದಿ ಜನರ ಹಿತಾಸಕ್ತಿಗಳಿಗಾಗಿ ರಾಜೀನಾಮೆ ನೀಡಲು ಸಿದ್ಧ. ಸಂತ್ರಸ್ತೆಗೆ ನ್ಯಾಯ ಕೊಡಿಸಲು ನಾನು ಸಿದ್ಧಳಾಗಿದ್ದು, ದಯವಿಟ್ಟು ವೈದ್ಯಕೀಯ ಸೇವೆಗಳನ್ನು ಮುಂದುವರೆಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಸರಿಯಾಗಿ ಮಾತನಾಡು ಇಲ್ಲಾ, ನಿನ್ನ ಅಜ್ಜಿಗಾದ ಸ್ಥಿತಿ… ರಾಹುಲ್ ಗಾಂಧಿ ಕುರಿತು ಬಿಜೆಪಿ ನಾಯಕನ ಹೇಳಿಕೆ ವೈರಲ್
ಅವರಿಗೆ ನ್ಯಾಯ ಬೇಡ, ಕುರ್ಚಿ ಬೇಕು. ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ಕೊಡಲೂ ಸಿದ್ಧ. ನನಗೆ ಮುಖ್ಯಮಂತ್ರಿ ಸ್ಥಾನ ಬೇಕಿಲ್ಲ. ಆದರೆ ಜನರಿಗೆ ನ್ಯಾಯ ಸಿಗಬೇಕೆಂದು ನಾನು ಬಯಸುತ್ತೇನೆ. ನನಗೆ ಹತ್ಯೆಯಾದ ವೈದ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸುತ್ತೇನೆ. ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ಸಾಮಾನ್ಯ ಜನರಿಗೆ ತೀವ್ರ ಅನಾನುಕೂಲ ಉಂಟಾಗಿದ್ದು, ದಯವಿಟ್ಟು ವೈದ್ಯಕೀಯ ಸೇವೆಯನ್ನು ಮುಂದುವರೆಸಿ ಎಂದು ವಿನಂತಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ವೈದ್ಯರು ಪ್ರತಿಭಟನೆಯನ್ನು ಮುಂದುವರೆಸಿದ್ದು, ನ್ಯಾಯ ಸಿಗುವವರೆಗೂ ಯಾವುದೇ ಕಾರಣಕ್ಕೂ ವೈದ್ಯಕೀಯ ಸೇವೆಗಳನ್ನು ಮುಂದುವರೆಸುವುದಿಲ್ಲ ಎಂದು ತಾಕೀತು ಮಾಡಿದ್ದಾರೆ. ಈ ವಿಚಾರ ಪಶ್ಚಿಮ ಬಂಗಾಳ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.