

ಕೋಲ್ಕತ: ಮಮತಾ ಬ್ಯಾನರ್ಜಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸರ 124ನೇ ಜನ್ಮದಿನಾಚರಣೆಯಂದು ಕೇಂದ್ರ ಸರ್ಕಾರದ ಬಳಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ದೆಹಲಿ ಮಾತ್ರ ಏಕೆ ರಾಜಧಾನಿಯಾಗಬೇಕು ದೇಶದ ನಾಲ್ಕು ದಿಕ್ಕಿನಲ್ಲಿ ನಾಲ್ಕು ರಾಜಧಾನಿ ರಚಿಸಿ, ಅಲ್ಲಿಯೂ ಸಂಸತ್ ಅಧಿವೇಶನಗಳನ್ನು ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೆಹಲಿ ಮಾತ್ರ ಏಕೆ ರಾಜಧಾನಿಯಾಗಬೇಕು? ಅಲ್ಲಿ ಮಾತ್ರ ಏಕೆ ಸಂಸತ್ ರಚನೆಯಾಗಬೇಕು? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಎಲ್ಲವೂ ದೆಹಲಿಗೆ ಮಾತ್ರವೇ ಸೀಮಿತವಾಗಿರುವುದಾದರೂ ಏಕೆ? ನಾಲ್ಕು ರಾಷ್ಟ್ರೀಯ ರಾಜಧಾನಿ ರಚಿಸುವ ಕೂಗಿನ ಪರ ಸಂಸತ್ನಲ್ಲಿ ಧ್ವನಿ ಎತ್ತುವಂತೆ ನನ್ನ ಸಂಸತ್ ಸದಸ್ಯರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಆಲೋಚನೆಗಳನ್ನು ಬದಲಿಸಬೇಕಿದೆ. ಕೇವಲ ಒಬ್ಬ ನಾಯಕನಿಂದ ಒಂದು ದೇಶವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸಂಸತ್ ರಚಿಸುತ್ತದೆ. ಸಾವಿರಾರು ಕೋಟಿ ರೂಪಾಯಿ ಕೊಟ್ಟು ವಿಮಾನಗಳನ್ನು ಖರೀದಿಸುತ್ತದೆ. ಆದರೆ ನೇತಾಜಿಗೆ ಒಂದು ಸ್ಮಾರಕ ನಿರ್ಮಿಸಲು ಮಾತ್ರ ಅವರಿಂದ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದ್ದಾರೆ. ನೇತಾಜಿ ಅವರ ಜನ್ಮದಿನೋತ್ಸವ ಆಚರಿಸುವಾಗ 'ಪರಾಕ್ರಮ' ಎಂಬ ಪದವನ್ನು ಕೇಂದ್ರ ಸರ್ಕಾರ ಏಕೆ ಬಳಸುತ್ತಿದೆಯೋ ನನಗೆ ಅರ್ಥವಾಗುತ್ತಿಲ್ಲ' ಎಂದು ಅವರು ದೂರಿದ್ದಾರೆ. (ಏಜೆನ್ಸೀಸ್)