

Mahindra Thar: ಪೂರ್ವ ದೆಹಲಿಯ ಶೋ ರೂಮ್ ಒಂದರಲ್ಲಿ ಮಹಿಳೆಯೊಬ್ಬಳು ಏಕಾಏಕಿ ಆಕ್ಸಿಲರೇಟರ್ ತುಳಿದ ಹಿನ್ನೆಲೆ ಹೊಸ ಮಹೀಂದ್ರಾ ಥಾರ್ ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದಿರುವ ಘಟನೆ ಸೋಮವಾರ(ಸೆ.8) ನಡೆದಿದೆ. ಅಪಘಾತದ ನಂತರ ವೈರಲ್ ವಿಡಿಯೋದಲ್ಲಿ ಕಾರು ಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದೀಗ ಕಾರು ಚಾಲನೆ ಮಾಡಿದ 29 ವರ್ಷದ ಮಾನಿ ಪವಾರ್ ಅಂದು ಏನಾಗಿತ್ತು ಎಂಬುದರ ಬಗ್ಗೆ ಹೇಳಿದ್ದಾರೆ.
ಪೂಜೆ ವೇಳೆ ಶೋ ರೂಮ್ನಿಂದ ಮಹೀಂದ್ರಾ ಥಾರ್ ಕೆಳಗೆ ಬಿದ್ದ ಹಿನ್ನೆಲೆ ಚಾಲಕಿ ಮೃತಪಟ್ಟಿದ್ದಾಳೆ ಎಂದು ವದಂತಿ ಹಬ್ಬಿತ್ತು. ಆದರೆ, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಿ ತಮ್ಮ ಸಾವಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಹೊಸ ಕಾರಿನ ಟೈರ್ ಅಡಿಯಲ್ಲಿ ನಿಂಬೆಹಣ್ಣು ಇಟ್ಟು ಪೂಜೆ ಬಳಿಕ ಅದರ ಮೇಲೆ ಕಾರಿನ ಟೈರ್ ಓಡಿಸಬೇಕಿತ್ತು. ಆದರೆ, ಆಕಸ್ಮಿಕವಾಗಿ ಆಕ್ಸಿಲರೇಟರ್ ಒತ್ತಿದ್ದರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ವಾಹನ ಶೋ ರೂಂನ ಮೊದಲ ಮಹಡಿಯಿಂದ ಏಕಾಏಕಿ ಕೆಳಗೆ ಬಿದ್ದು ಸಂಪೂರ್ಣ ಜಖಂ ಆಗಿತ್ತು. ಕಾರು ಬಿದ್ದ ನಂತರ, ನಾವು ಮೂವರೂ ಮುಂಭಾಗದ ಬಾಗಿಲಿನಿಂದ ಹೊರಬಂದೆವು ಮತ್ತು ನಮ್ಮಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಪವಾರ್ ಹೇಳಿದರು.
"ನಾನು ಜೀವಂತವಾಗಿದ್ದೇನೆ, ಸತ್ತಿಲ್ಲ. ದಯವಿಟ್ಟು ನಕಲಿ ವೀಡಿಯೊಗಳನ್ನು ಹರಡುವುದನ್ನು ನಿಲ್ಲಿಸಿ" ಎಂದು ಅವರು ಹೇಳಿದರು.(ಏಜೆನ್ಸೀಸ್)