ಅಪಘಾತಕ್ಕೀಡಾಗಿದ್ದ ಬಿಗ್​ಬಾಸ್ ಮಾಜಿ ಸ್ಪರ್ಧಿ ನಿಧನ; ಪ್ರಸಿದ್ಧ ವಿಮರ್ಶಕನನ್ನು ಕಳೆದುಕೊಂಡ ಸಿನಿಮಾ ರಂಗ

mahesh
Published on

ಅಮರಾವತಿ: ತೆಲುಗು ಚಿತ್ರರಂಗದ ಪ್ರಸಿದ್ಧ ವಿಮರ್ಶಕ, ಬಿಗ್​ಬಾಸ್ ರಿಯಾಲಿಟಿ ಶೋನ ಮಾಜಿ ಸ್ಪರ್ಧಿ ಹಾಗೂ ನಟ ಮಹೇಶ್ ಕಾಥಿ ಶನಿವಾರದಂದು ನಿಧನರಾಗಿದ್ದಾರೆ. ಕೆಲ ದಿನಗಳ ಹಿಂದೆ ಅಪಘಾತಕ್ಕೀಡಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮಹೇಶ್ ಕಾಥಿ ಅವರು ಕಳೆದ ಜೂನ್ 25ರಂದು ನೆಲ್ಲೂರು ಜಿಲ್ಲೆಯ ಕೊಡವಲೂರು ಮಂಡಲದ ಬಳಿ ಚೆನ್ನೈ-ಕೋಲ್ಕತಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದ್ದರು. ಅವರನ್ನು ಚೆನ್ನೈನ ಅಪೊಲೊ ಗ್ರೀಮ್ಸ್ ರಸ್ತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಸಂಜೆ 4 ಗಂಟೆ ಸಮಯಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ.

ಮಹೇಶ್ ತೆಲುಗು ಸಿನಿಮಾಗಳ ವಿಮರ್ಶೆ ಮಾಡಿ ಭಾರೀ ಸುದ್ದಿಯಾಗುತ್ತಿದ್ದರು. ಪವನ್ ಕಲ್ಯಾಣ್ ಸಿನಿಮಾಗಳ ಬಗ್ಗೆ ಅವರು ಮಾಡುತ್ತಿದ್ದ ವಿಮರ್ಶೆ ಸಾಕಷ್ಟು ಬಾರಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಬಿಗ್​ಬಾಸ್​ನಲ್ಲೂ ಸ್ಪರ್ಧಿಸಿದ್ದ ಅವರು ಕೆಲವು ವಾಹಿನಿಗಳಲ್ಲಿ ಪ್ಯಾನೆಲ್​ ಡಿಬೆಟ್​ಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಒಂದೆರಡು ಸಿನಿಮಾಗಳಲ್ಲೂ ನಟಿಸಿದ್ದರು. ಧಾರ್ಮಿಕ ವಿಚಾರದಲ್ಲಿ ಹೇಳಿಕೆ ನೀಡಿ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net