ವಾಜೆ ಅಕ್ರಮ ಬಯಲು: ಐಷಾರಾಮಿ ಹೋಟೆಲ್​ನಲ್ಲಿ ವಸೂಲಿ ದಂಧೆ

vaze
Published on

ಮುಂಬೈ: ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಜೆಯ ಅಧಿಕಾರ ದುರುಪಯೋಗ, ಭ್ರಷ್ಟಾಚಾರಗಳು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ವಿಚಾರಣೆ ವೇಳೆ ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ವಜೆ ವಸೂಲಿ ದಂಧೆಯು ನಾರಿಮನ್ ಪಾಯಿಂಟ್​ನಲ್ಲಿರುವ ಪಂಚತಾರಾ ಹೋಟೆಲ್​ನಲ್ಲಿ ನಡೆಯುತ್ತಿತ್ತು ಎಂಬುದು ಬಯಲಾಗಿದೆ.

ಉದ್ಯಮಿಯೊಬ್ಬರು 12 ಲಕ್ಷ ರೂಪಾಯಿ ನೀಡಿ ಈ ಹೋಟೆಲ್​ನ 1964ನೇ ಸಂಖ್ಯೆಯ ರೂಂನನ್ನು 100 ದಿನಕ್ಕಾಗಿ ಬುಕ್ ಮಾಡಿದ್ದರು. ವಜೆ ನಕಲಿ ಆಧಾರ್ ಕಾರ್ಡ್ ಬಳಸಿ ಸುಶಾಂತ್ ಸದಾಶಿವ ಖೇಮ್ಕರ್ ಎಂಬ ಹೆಸರಿನಲ್ಲಿ ಈ ಹೋಟೆಲ್​ಗೆ ಬರುತ್ತಿದ್ದರು ಎಂದು ಎನ್​ಐಎ ತಿಳಿಸಿದೆ.

ಕೆಲ ವಿವಾದದಲ್ಲಿ ಸಿಲುಕಿಕೊಂಡಿದ್ದ ಉದ್ಯಮಿ, ವಜೆಯಿಂದ ನೆರವು ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಅವರಿಗೆ ಈ ರೂಂನನ್ನು ಟ್ರಾವಲ್ ಏಜೆಂಟರೊಬ್ಬರ ಮೂಲಕ ಬುಕ್ ಮಾಡಿಕೊಟ್ಟಿದ್ದರು. ಈ ಹೋಟೆಲ್​ಗೆ ಫೆ. 16ರಂದು ಇನ್ನೋವಾ ಕಾರಿನಲ್ಲಿ ಬಂದಿದ್ದ ವಜೆ, ಫೆ. 20ಕ್ಕೆ ಇಲ್ಲಿಂದ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ನಿರ್ಗಮಿಸಿದ್ದರು.

ಈ ಎರಡೂ ವಾಹನಗಳನ್ನು ಎನ್​ಐಎ ವಶಕ್ಕೆ ಪಡೆದಿದೆ. ಮುಕೇಶ್ ಅಂಬಾನಿ ನಿವಾಸದ ಬಳಿ ಪತ್ತೆಯಾದ ಸ್ಪೋಟಕ ಸಾಮಗ್ರಿ ಇರಿಸಿದ್ದ ಕಾರು ಮತ್ತು ಈ ಕಾರಿನ ಮಾಲೀಕ ಮನಸುಖ್ ಹಿರೇನ್ ನಿಗೂಢ ಸಾವಿನ ಪ್ರಕರಣ ಸಂಬಂಧ ವಜೆಯನ್ನು ಬಂಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net