ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರ ಪುಂಡರ ಪುಂಡಾಟ: 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತ

belagavi bus
Published on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಮಹಾರಾಷ್ಟ್ರ ಪುಂಡರು ಪುಂಡಾಟ ಮುಂದುವರಿಸಿದ್ದು, ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳಬೇಕಿದ್ದ 400ಕ್ಕೂ ಹೆಚ್ಚು ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ.

ಈ ಕುರಿತು ಪ್ರತಿಕ್ರಿಯಿಸಿದ NWKRTC ಸಂಚಾರ ಅಧಿಕಾರಿ ಕೆ.ಕೆ.ಲಮಾಣಿ, ಬೆಳಗಾವಿ ವಿಭಾಗದಿಂದ ಈವರೆಗೆ 80 ಬಸ್‌ಗಳು ಮಹಾರಾಷ್ಟ್ರಕ್ಕೆ ತೆರಳಬೇಕಿತ್ತು. ಸಂಜೆಯವರೆಗೂ 212 ಬಸ್‌ಗಳು, ಚಿಕ್ಕೋಡಿ ವಿಭಾಗದಿಂದ 150 ಬಸ್​ಗಳು ತೆರಳಬೇಕಿತ್ತು. ಅದೇ ರೀತಿ ಮಹಾರಾಷ್ಟ್ರದಿಂದ 60ರಿಂದ 70 ಬಸ್‌ಗಳು ಬೆಳಗಾವಿಗೆ ಬರಬೇಕಿತ್ತು. ಪೊಲೀಸರ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದೇವೆ ಎಂದರು.

ನಿನ್ನೆ(ಮಂಗಳವಾರ) ಮಹಾರಾಷ್ಟ್ರದ ಕುಡಾಲ ಬಸ್ ನಿಲ್ದಾಣದ ಡಿಪೋದಲ್ಲಿ ಕೆಎಸ್​ಆರ್​ಟಿ ಬಸ್‌ಗೆ ಮಸಿ ಬಳಿದು, ದೊಡ್ಡ ಅಕ್ಷರಗಳಿಂದ 'ಜೈ ಮಹಾರಾಷ್ಟ್ರ' ಎಂದು ಬರೆದಿದ್ದಾರೆ. ನಮ್ಮ ಚಾಲಕ ನಿರ್ವಾಹಕರು ಈ ಬಗ್ಗೆ ಎಫ್ಐಆರ್ ದಾಖಲಿಸಿದ್ದಾರೆ. ಮಹಾರಾಷ್ಟ್ರದಲ್ಲಿಯೇ ನಮ್ಮ 40ರಿಂದ 50 ಬಸ್‌ಗಳು ಇವೆ. ಮಹಾರಾಷ್ಟ್ರದ ಎರಡು ಬಸ್‌ಗಳು ನಮ್ಮ ಡಿಪೋದಲ್ಲಿ ಸೇಫ್ ಆಗಿವೆ. ಬಸ್‌ಗಳ ಸಂಚಾರ ಸ್ಥಗಿತ ಹಿನ್ನೆಲೆ ಬೆಳಗಾವಿ ವಿಭಾಗವೊಂದಕ್ಕೆ 10 ರಿಂದ 15 ಲಕ್ಷ ರೂ. ನಷ್ಟ ಉಂಟಾಗಿದೆ ಎಂದರು.(ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net