

ಮುಂಬೈ: ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಸೋಮವಾರದಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅವರ ವಿರುದ್ಧ ಬಾಂಬೆ ಹೈ ಕೋರ್ಟ್ ಸಿಬಿಐ ತನಿಖೆ ಆದೇಶಿಸಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ರಾಜೀನಾಮೆ ಕೊಡುವುದಕ್ಕೂ ಮುನ್ನ ಅನಿಲ್ ಅವರು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅದಾದ ಮೇಲೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ಅದರ ಮಾಹಿತಿಯನ್ನು ಎನ್ಸಿಪಿ ಸಚಿವ ನವಾಬ್ ಮಲಿಕ್ ಅವರು ಹಂಚಿಕೊಂಡಿದ್ದಾರೆ.
ಅನಿಲ್ ಅವರ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಮುಂಬೈನ ಬಾರ್ ಮತ್ತು ಹೋಟೆಲ್ಗಳಿಂದ ಮಾಸಿಕ 100 ಕೋಟಿ ರೂಪಾಯಿ ಸಂಗ್ರಹಿಸಿ ಎಂದು ಅನಿಲ್ ಅವರು ಸಚಿನ್ ವಾಜೆ ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದರು ಎಂದು ಆರೋಪದಲ್ಲಿ ತಿಳಿಸಲಾಗಿದೆ. ಈ ಆರೋಪದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಬಾಂಬೆ ಹೈಕೋರ್ಟ್ ಆದೇಶಿಸಿದೆ. 15 ದಿನಗಳೊಳಗೆ ಪ್ರಾರ್ಥಮಿಕ ತನಿಖೆ ನಡೆಸಬೇಕೆಂದು ತಿಳಿಸಲಾಗಿದೆ. (ಏಜೆನ್ಸೀಸ್)