

ಮುಂಬೈ: ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿದ ಐತಿಹಾಸಿಕ ಸಿನಿಮಾ 'ಛಾವಾ'ವನ್ನು ತೆರಿಗೆ ಮುಕ್ತಗೊಳಿಸಬೇಕೆಂಬ ವ್ಯಾಪಕ ಮನವಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್(CM Fadnavis) ಪ್ರತಿಕ್ರಿಯಿಸಿದ್ದಾರೆ. ಸಿನಿಮಾದ ಐತಿಹಾಸಿಕ ಚಿತ್ರಣಕ್ಕಾಗಿ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಸಾರ್ವಜನಿಕರಿಂದ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದು ಹೇಳಿದರು.
ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನದ ಬಗ್ಗೆ ಉತ್ತಮ ಸಿನಿಮಾ ನಿರ್ಮಾಣವಾಗಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಫಡ್ನವೀಸ್ ಹೇಳಿದರು. ನಾನು ಇನ್ನೂ ನೋಡಿಲ್ಲವಾದರೂ ಇತಿಹಾಸವನ್ನು ತಿರುಚದೆ ಚಿತ್ರವನ್ನು ನಿರ್ಮಿಸಲಾಗಿದೆ ಎಂದು ಜನರಿಂದ ಕೇಳಿದ್ದೇನೆ. 2017ರಲ್ಲಿ ಮಹಾರಾಷ್ಟ್ರವು ಈಗಾಗಲೇ ಮನರಂಜನಾ ತೆರಿಗೆಯನ್ನು ರದ್ದುಗೊಳಿಸಿದೆ ಎಂದು ಅವರು ಹೇಳಿದರು. ಈ ಚಿತ್ರವನ್ನು ಪ್ರಚಾರ ಮಾಡಲು ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ಮಾಡಲು ನಾವು ಏನು ಮಾಡಬಹುದು ಎಂಬುದನ್ನು ನೋಡುತ್ತೇವೆ ಎಂದು ತಿಳಿಸಿದರು.
ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಯಿತು. 'ಛಾವಾ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದ್ದು, ಈಗಾಗಲೇ ದೇಶೀಯ ಗಳಿಕೆಯಲ್ಲಿ 100 ಕೋಟಿ ರೂ.ಗಳ ಗಡಿಯನ್ನು ದಾಟಿದೆ. ಚಿತ್ರವು ತನ್ನ ಆರಂಭಿಕ ವಾರಾಂತ್ಯದಲ್ಲಿಯೇ 121.43 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ ಎಂದು ವರದಿ ಮಾಡಲಾಗಿದೆ.(ಏಜೆನ್ಸೀಸ್)