'ಲವ್​ ಜಿಹಾದ್'​ ತಡೆಗಟ್ಟಲು ಮತಾಂತರ ವಿರೋಧಿ ಕಾನೂನು ಅಂಗೀಕಾರ

mp
Published on

ಭೋಪಾಲ್: ಅನ್ಯಧರ್ಮೀಯ ವ್ಯಕ್ತಿಯನ್ನು ಮದುವೆಯಾದ ಕಾರಣಕ್ಕೆ ಅಥವಾ ಇನ್ಯಾವುದೇ ಮೋಸದ ವಿಧಾನಗಳಿಂದ ಮತಾಂತರ ಮಾಡುವುದನ್ನು ತಡೆಗಟ್ಟುವ ಕಾನೂನನ್ನು ಮಧ್ಯಪ್ರದೇಶ ಸರ್ಕಾರವು ಜಾರಿಗೆ ತಂದಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭೆಯು ಧಾರ್ಮಿಕ ಸ್ವಾತಂತ್ರ್ಯ ಮಸೂದೆ(ಫ್ರೀಡಮ್​ ಟು ರಿಲಿಜಿಯನ್ ಬಿಲ್​, 2021)ಯನ್ನು ಸೋಮವಾರ ಅಂಗೀಕರಿಸಿದೆ.

ಈ ಕಾನೂನಿನ ಕೆಳಗೆ ವಿವಾಹದ ಕಾರಣ ಒಡ್ಡಿ ಅಥವಾ ಬೇರೆ ಮೋಸದ ವಿಧಾನಗಳಿಂದ ಮತ ಪರಿವರ್ತನೆ ಮಾಡುವುದು ಅಪರಾಧವಾಗಲಿದೆ. ತಪ್ಪಿತಸ್ಥರಿಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಅವಕಾಶವಿದೆ. ಇಂದು ವಿಧಾನಸಭೆಯಲ್ಲಿ ಈ ಬಗ್ಗೆ ನಡೆದ ಚರ್ಚೆಯ ನಂತರ, ಮೌಖಿಕ ಮತ ಚಲಾವಣೆಯ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು.

ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ ಮಿಶ್ರ, “ನಮ್ಮ ಹೆಣ್ಣುಮಕ್ಕಳನ್ನು ಅಪಾಯಕ್ಕೆ ತಳ್ಳುವ, ನಮ್ಮ ಭಾವನೆಗಳಿಗೆ ಧಕ್ಕೆ ತರುವ, 'ಜಿಹಾದ್​'ಗೆ ಮಾರ್ಗ ಕಲ್ಪಿಸುವ ಯಾವುದೇ ರೂಪದ ಪ್ರೀತಿಗೆ ನಮ್ಮ ವಿರೋಧವಿದೆ” ಎಂದರು.

ಈ ಮುನ್ನ ಇದೇ ರೀತಿ ಮತಾಂತರ ವಿರೋಧಿ ಸುಗ್ರೀವಾಜ್ಞೆಯನ್ನು ರಾಜ್ಯ ಸರ್ಕಾರ ಹೊರಡಿಸಿತ್ತು. ಜನವರಿ 9 ರಂದು ಮಧ್ಯಪ್ರದೇಶ ಫ್ರೀಡಂ ಆಫ್​ ರಿಲಿಜಿಯನ್ ಆರ್ಡಿನೆನ್ಸ್​, 2020 ಕ್ಕೆ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅನುಮೋದನೆ ನೀಡಿದ್ದರು. ಸುಗ್ರೀವಾಜ್ಞೆ ಜಾರಿಗೆ ಬಂದ ಒಂದೇ ತಿಂಗಳಲ್ಲಿ 23 ಪ್ರಕರಣಗಳು ದಾಖಲಾಗಿದ್ದವು ಎನ್ನಲಾಗಿದೆ. (ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net