'ಧಕ್-ಧಕ್' ಬೆಡಗಿಯನ್ನು 'ದೇಶದ್ರೋಹಿ' ಎಂದ ನೆಟ್ಟಿಗರು! ಕಾರಣ ಇದೇ ನೋಡಿ..

madhuri
Published on

ನವದೆಹಲಿ: ಬಾಲಿವುಡ್‌ನ 'ಧಕ್-ಧಕ್' ಬೆಡಗಿಯಾಗಿ ಕೋಟ್ಯಂತರ ಸಿನಿಪ್ರಿಯರ ಮನಗೆದ್ದಿದ್ದ ಮಾಧುರಿ ದೀಕ್ಷಿತ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್​ ಆಗುತ್ತಿದ್ದಾರೆ. ದೇಶಾಭಿಮಾನಿಗಳು ದೇಶದ್ರೋಹಿ ಎಂದು ಕಿಡಿಕಾರುತ್ತಿದ್ದಾರೆ. ಇಷ್ಟಕ್ಕೂ ಈ ಅಪ್ರತಿಮ ಸಂದರ್ಯವತಿಯನ್ನು ಹೀಗೆನ್ನಲು ಕಾರಣವೇನು ಎಂಬ ಪ್ರಶ್ನೆ ಮೂಡಬಹುದು. ಹೌದು ಇದಕ್ಕೆ ಕಾರಣವಿದೆ.

ನಟಿ ಮಾಧುರಿ ಪಾಕಿಸ್ತಾನಿ ಮೂಲದ ಪ್ರಮೋಟರ್​ ರೆಹಾನ್ ಸಿದ್ದಿಕಿ ಜೊತೆಗೂಡಿ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮವು ಇದೇ ಆಗಸ್ಟ್ ನಲ್ಲಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ನಡೆಯಲಿದೆ. ಇದಕ್ಕೆ ಸಂಬಂಧಿಸಿದ ಚಿತ್ರವನ್ನು ರಾಜಕೀಯ ವ್ಯಾಖ್ಯಾನಕಾರರು, ಅಂಕಣಕಾರರೂ ಆದ ಸುನಂದಾ ವಶಿಷ್ಠ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರೆಹಾನ್ ಸಿದ್ದಿಕಿ ಐಎಸ್‌ಐ ಜೊತೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಸುನಂದಾ ವಶಿಷ್ಠ ಅವರು ಬಿಜೆಪಿ ಮುಖಂಡ ಕಿಶನ್ ರೆಡ್ಡಿ ಅವರ ನಾಲ್ಕು ವರ್ಷಗಳ ಹಳೆಯ ಪತ್ರವನ್ನೂ ಹಂಚಿಕೊಂಡಿದ್ದಾರೆ. ಅದರಲ್ಲಿ ರೆಹಾನ್ ಸಿದ್ದಿಕಿಯನ್ನು ಗೃಹ ಇಲಾಖೆ ಕಪ್ಪು ಪಟ್ಟಿಗೆ ಸೇರಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿ ಸುನಂದಾ ವಶಿಷ್ಠ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಭಾರತೀಯ ಭದ್ರತಾ ಏಜೆನ್ಸಿಗಳಿಗೆ ಬೇಕಾಗಿರುವ ಪಾಕಿಸ್ತಾನಿ ಮೂಲದ ಪ್ರೊಮೋಟರ್​ನೊಂದಿಗೆ ಮಾಧುರಿ ಸಹಕರಿಸಿದ್ದಾರೆ ಎಂದು ನೋಡಿ ನನಗೆ ಆಘಾತವಾಗಿದೆ ಎಂದು ಅವರು ಪ್ರಶ್ನೆ ಎತ್ತಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ತಕ್ಷಣ ಟ್ವಿಟ್ಟರ್‌ನಲ್ಲಿ ಕೋಲಾಹಲ ಎದ್ದಿದೆ. ಜನರು ನಟಿಯ ವಿರುದ್ಧ ಹೇಳಿಕೆಗಳನ್ನು ನೀಡಲು ಪ್ರಾರಂಭಿಸಿದ್ದಾರೆ. ಮಾಧುರಿಯನ್ನು ತೀವ್ರವಾಗಿ ನಿಂದಿಸಲು ಪ್ರಾರಂಭಿಸಿದ್ದಾರೆ. ಒಬ್ಬ ಬಳಕೆದಾರರು 'ಮಾಧುರಿ ದೀಕ್ಷಿತ್ ಅವರು ಈ ದಿನವನ್ನು ನಾವು ನೋಡುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ, ನೀವು ದೇಶದ್ರೋಹಿ' ಎಂದು ಬರೆದಿದ್ದಾರೆ.

'ಬಹುಶಃ ಈ ನಟಿಗೆ ಆತನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ' ಹೀಗಾಗಿ ಆಕೆಗೆ ಗೊತ್ತಿಲ್ಲದೆ ಇದೆಲ್ಲಾ ನಡೆದಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಭೂಗತ ಜಗತ್ತಿನ ಹಣವನ್ನು ಬಳಸುತ್ತಾರೆ ಮತ್ತು ಎಲ್ಲ ಸ್ಟಾರ್‌ಗಳು ಎಲ್ಲೋ ಒಂದು ಕಡೆ ಸಂಪರ್ಕ ಹೊಂದಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧುರಿ ದೀಕ್ಷಿತ್ ಅವರಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net