

ಮಧುಗಿರಿ: ರಸ್ತೆ ಬದಿ ರೈತರೊಬ್ಬರ ಜಮೀನಿನಲ್ಲಿ ಸ್ವತಃ ತಹಸೀಲ್ದಾರ್ ಡಾ. ಜಿ.ವಿಶ್ವನಾಥ್ ಅವರು ಜೋಳ ತುಂಬಿದ್ದ ಮಂಕರಿಯನ್ನು ತಲೆ ಮೇಲೆ ಹೊತ್ತು ರೈತರ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಆ ಮೂಲಕ ಸುಗ್ಗಿ ಹಬ್ಬದ ಶುಭಾಶಯ ತಿಳಿಸಿದರು.
ಗುರುವಾರ ಬೆಳೆ ಸಮೀಕ್ಷೆ ನಿಮಿತ್ತ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಮತ್ತು ಕೊಡಿಗೇನಹಳ್ಳಿಗೆ ತಹಸೀಲ್ದಾರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಐ.ಡಿ.ಹಳ್ಳಿಯ ನಾಗಿರೆಡ್ಡಿಯವರ ಜಮೀನಿನಲ್ಲಿ ಯಂತ್ರ ಬಳಸಿ ಜೋಳ ಬಿಡಿಸುವ ಕೆಲಸದಲ್ಲಿ ರೈತರು ನಿರತರಾಗಿದ್ದರು. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಅಲ್ಲಿಗೆ ಭೇಟಿ ನೀಡಿದ ತಹಸೀಲ್ದಾರ್, ಕೃಷಿ ಚಟುವಟಿಕೆಗಳ ಬಗ್ಗೆ ಜಮೀನಿನ ಮಾಲೀಕರೊಂದಿಗೆ ಮಾಹಿತಿ ಪಡೆದರು. ಬಳಿಕ ರೈತರ ಕೆಲಸಕ್ಕೆ ಉತ್ತೇಜನ ನೀಡಲು ಸ್ವತಃ ತಾವೇ ಜೋಳ ತುಂಬಿದ ಮಂಕರಿಯನ್ನು ತಲೆ ಮೇಲೆ ಹೊತ್ತು ಯಂತ್ರಕ್ಕೆ ಹಾಕಿದರು.
ಅಧಿಕಾರಿಯಂತೆ ದರ್ಪ ತೋರದೆ ರೈತರಂತೆ ನಡೆದುಕೊಂಡ ತಹಸೀಲ್ದಾರ್ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಧಿಕಾರಿಗಳೆಂದರೆ ಹೀಗಿರಬೇಕು ಎಂದು ತಲೆದೂಗಿದ್ದಾರೆ.