ಬ್ರಿಟಿಷ್​ ಕೌನ್ಸಿಲ್​ ಜಾಬ್​ ಬಿಟ್ಟು ಟೀ ಮಾರಾಟಕ್ಕಿಳಿದ ಎಂಎ ಇಂಗ್ಲಿಷ್​ ಪದವೀಧರೆಯ ಸ್ಫೂರ್ತಿದಾಯಕ ಕತೆ ಇದು!

Chaiwali
Published on

ನವದೆಹಲಿ: ಸಾಧಿಸುವ ಛಲವೊಂದಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಎಂಬಿಎ ವಿದ್ಯಾರ್ಥಿಯಾಗಿ ಟೀ ಮಾರುವುದರಲ್ಲಿ ಯಶಸ್ಸು ಕಂಡಿರುವ ಮಧ್ಯಪ್ರದೇಶದ ಚಾಯ್​ವಾಲಾ ಪ್ರಫುಲ್​ ಬಿಲ್ಲೋರ್​ ಜೀವಂತ ಸಾಕ್ಷಿ. ತುಂಬಾ ಓದಿದ್ದೇನೆ. ನನಗೆ ಸರಿಸಮನಾದ ಕೆಲಸ ಸಿಗುತ್ತಿಲ್ಲ ಎಂದು ಕೈಕಟ್ಟಿ ಕುಳಿತರೆ ಏನು ಸಾಧಿಸಲಾಗದು. ನಮ್ಮಲ್ಲಿರುವ ಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಏನು ಬೇಕಾದರು ಸಾಧಿಸಬಹುದು ಎಂಬುದನ್ನು ಪ್ರಫುಲ್​ ಬಿಲ್ಲೋರ್​ ಸಾಧಿಸಿ ತೋರಿಸಿದ್ದಾರೆ. ಅಲ್ಲದೆ, ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಇದೀಗ ಶರ್ಮಿಷ್ಠಾ ಘೋಷ್ ಎಂಬಾಕೆ ಆ ಸಾಲಿಗೆ ಸೇರಿದ್ದಾರೆ.

ಎಂಎ ಇಂಗ್ಲಿಷ್​​ ಅಧ್ಯಯನ ಮಾಡಿರುವ ಶರ್ಮಿಷ್ಠಾ, ಬ್ರಿಟಿಷ್​ ಕೌನ್ಸಿಲ್​ನಲ್ಲಿ ಉತ್ತಮ ಸಂಬಳದ ಕೆಲಸ ಬಿಟ್ಟು, ದೆಹಲಿ ಕ್ಯಾಂಟ್‌ನ ಗೋಪಿನಾಥ್ ಬಜಾರ್​ನಲ್ಲಿ ಸಣ್ಣ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ. ಆಕೆಗೆ ಲುಫ್ಥಾನ್ಸಾದಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತೆ ಭಾವನಾ ರಾವ್​ ನೆರವಾಗಿದ್ದಾರೆ. ಶರ್ಮಿಷ್ಠಾ ಅವರ ಕುಟುಂಬವು ಸಹ ಆಕೆಯ ಬೆನ್ನಿಗೆ ನಿಂತಿದ್ದು, ಸಂಜೆಯ ಸಮಯದಲ್ಲಿ ಆಕೆಯ ವ್ಯವಾಹರಕ್ಕೆ ಸಹಾಯ ಮಾಡುತ್ತಾರೆ.

ಇದೀಗ ಶರ್ಮಿಷ್ಠಾ ಅವರು ಸ್ಫೂರ್ತಿದಾಯಕ ಕತೆಯನ್ನು ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್​ ಸಂಜಯ್​ ಖನ್ನಾ ಅವರು ತಮ್ಮ ಲಿಂಕ್​ಡಿನ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಯಾವುದೇ ಕೆಲಸವು ಚಿಕ್ಕದಲ್ಲ ಅಥವಾ ದೊಡ್ಡದಲ್ಲ ಆದರೆ, ಒಬ್ಬರು ದೊಡ್ಡ ಕನಸು ಕಾಣಬೇಕು ಎಂದು ಶೀರ್ಷಿಕೆ ಬರೆದಿದ್ದಾರೆ.

ಕೆಲವು ದಿನಗಳ ಹಿಂದೆ ನಾನು ದೆಹಲಿ ಕ್ಯಾಂಟ್‌ನ ಗೋಪಿನಾಥ್ ಬಜಾರ್‌ನಲ್ಲಿದ್ದೆ ಮತ್ತು ಚಹಾ ಕುಡಿಯಲು ಬಯಸಿದ್ದೆ. ಈ ವೇಳೆ ಈ ಚಿಕ್ಕ ಟೀ ಅಂಗಡಿಯನ್ನು ಚಕ್ರಗಳಲ್ಲಿ ನಿರ್ವಹಿಸುತ್ತಿರುವ ಹಾಗೂ ತುಂಬಾ ಚೆನ್ನಾಗಿ ಇಂಗ್ಲಿಷ್ ಮಾತನಾಡುವ ಮಹಿಳೆಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಮತ್ತು ಆಹ್ಲಾದವು ಆಯಿತು.

ಆಕೆ ತನ್ನ ಹೆಸರನ್ನು ಶರ್ಮಿಷ್ಠಾ ಘೋಷ್ ಎಂದು ಹೇಳಿದರು. ಎಂಎ ಇಂಗ್ಲಿಷ್ ಮಾಡಿದ್ದಾರೆ ಮತ್ತು ಬ್ರಿಟಿಷ್​ ಕೌನ್ಸಿಲ್​ನ ಲೈಬ್ರರಿಯಲ್ಲಿ ಕೆಲಸ ಮಾಡಿದ್ದಾರೆ. ತನ್ನ ಕನಸನ್ನು ನನಸು ಮಾಡಲು ಇದೀಗ ಆ ಉದ್ಯೋಗವನ್ನು ತೊರೆದು ಸ್ವಂತ ಉದ್ಯಮ ಮಾಡುತ್ತಿದ್ದಾರೆ. ಲುಫ್ಥಾನ್ಸದಲ್ಲಿ ಕೆಲಸ ಮಾಡುತ್ತಿರುವ ಶರ್ಮಿಷ್ಠಾ ಸ್ನೇಹಿತೆ ಭಾವನಾ ರಾವ್ ಕೂಡ ಈ ಚಿಕ್ಕ ಟೀ ಅಂಗಡಿಗೆಯನ್ನು ನಿರ್ವಹಿಸುವಲ್ಲಿ ಜಂಟಿ ಪಾಲುದಾರರಾಗಿದ್ದಾರೆ. ಇದಲ್ಲದೆ, ಉದ್ಯಮದಲ್ಲಿ ಸಹಾಯ ಮಾಡಲು ಶರ್ಮಿಷ್ಠಾ ತಮ್ಮ ಮನೆಯವರನ್ನು ನೇಮಿಸಿಕೊಂಡಿದ್ದು, ಅವರಿಗೆ ಸಂಬಳ ಸಹ ನೀಡುತ್ತಾರೆ.

ನಾನು ಈ ಪೋಸ್ಟ್ ಅನ್ನು ಶರ್ಮಿಷ್ಠಾರ ಅನುಮತಿಯೊಂದಿಗೆ ಬರೆದಿದ್ದೇನೆ ಮತ್ತು ಅವಳ ಈ ಫೋಟೋವನ್ನು ಪೋಸ್ಟ್ ಮಾಡುತ್ತಿದ್ದೇನೆ. ಇಲ್ಲಿ ಯಾವುದು ಸಣ್ಣ ಕೆಲಸವಲ್ಲ ಮತ್ತು ಯಾವುದು ದೊಡ್ಡ ಕೆಲಸವಲ್ಲ ಎಂದು ಹೇಳಲು ನಾನು ಬಯಸುತ್ತೇನೆ ಮತ್ತು ಇತರರನ್ನು ಪ್ರೇರೇಪಿಸಲು ಇಂತಹ ಜನರನ್ನು ಹೈಲೈಟ್ ಮಾಡಬೇಕು. ಕನಸನ್ನು ನನಸಾಗಿಸಲು ಶ್ರಮಿಸಬೇಕು. ಹತಾಶೆಯಲ್ಲಿರುವ ಮತ್ತು ವೃತ್ತಿಪರ ಸ್ಥಾನಮಾನಕ್ಕೆ ಅನುಗುಣವಾಗಿ ಸೂಕ್ತವಾದ ಉದ್ಯೋಗಕ್ಕಾಗಿ ಹುಡುಕಾಟದಲ್ಲಿರುವ ಅನೇಕ ಉನ್ನತ ಅರ್ಹ ಯುವಕರನ್ನು ನಾನು ಕಂಡಿದ್ದೇನೆ. ಈ ಸಂದೇಶವು ಅವರಿಗಾಗಿ ಎಂದು ಸಂಜಯ್​ ಖನ್ನಾ ಬರೆದುಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ಶರ್ಮಿಷ್ಠಾ ಘೋಷ್ ತನ್ನ ಯಶಸ್ಸಿಗೆ ತನ್ನ ಹೆತ್ತವರು ಮತ್ತು ಕುಟುಂಬ ಸದಸ್ಯರು ಕಾರಣವೆಂದು ಹೇಳಿದ್ದಾಳೆ ಮತ್ತು ಚಿಕ್ಕ ಟೀ ಅಂಗಡಿಯನ್ನು ಪ್ರಸಿದ್ಧ ಟೀ ಸ್ಟಾಲ್‌ ಆಗಿ ಮಾಡಲು ಕನಸು ಕಂಡಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net