

ಬೆಂಗಳೂರು: ರಾಹುಲ್ ಗಾಂಧಿ ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎನ್ನವ ಆರೋಪ ಕೇಳಿಬಂದಿದ್ದು ಇದಕ್ಕೆ ತುಪ್ಪ ಸುರಿಯುವಂತೆ ಬಿಹಾರದ ಕಾಂಗ್ರೆಸ್ ಶಾಸಕಿ ಹೇಳಿಕೆ ನೀಡಿದ್ದರು. ಇದೀಗ ರಾಹುಲ್ ಗಾಂಧಿಯ ಫ್ಲೈಯಿಂಗ್ ಕಿಸ್ ಬಗ್ಗೆ ಎಂ ಲಕ್ಷ್ಮಣ ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರದ ಕಾಂಗ್ರೆಸ್ ಶಾಸಕಿ ನೀತು ಸಿಂಗ್, “ರಾಹುಲ್ ಅವರಿಗೆ ಯುವತಿಯರ ಕೊರತೆ ಇಲ್ಲದಿರುವಾಗ 50 ವರ್ಷದ ಮಹಿಳೆಗೆ ಫ್ಲೈಯಿಂಗ್ ಕಿಸ್ ಏಕೆ ಕೊಡುತ್ತಾರೆ?” ಎಂದು ಅವರು ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದಲ್ಲದೆ ಬಿಹಾರದ ಹಿಸುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಫ್ಲೈಯಿಂಗ್ ಕಿಸ್ ವಿವಾದದ ಬಗ್ಗೆ ಮಾತನಾಡಿ, ರಾಹುಲ್ ಗಾಂಧಿ ಅವರ ಹೆಸರನ್ನು ಕೆಡಿಸುವ ಬಿಜೆಪಿಯ ಪ್ರಯತ್ನ ಇದು ಎಂದು ಕಿಡಿಕಾಡಿದ್ದರು.
ಇದೀಗ ಎಂ ಲಕ್ಷ್ಮಣ ಹೇಳಿಕೆ ನೀಡಿದ್ದು ನೇರವಾಗಿ ಸ್ಮೃತಿ ಇರಾನಿ ವಿರುದ್ಧವೇ ಹರಿಹಾಯ್ದಿದ್ದಾರೆ. ಎಂ ಲಕ್ಷ್ಮಣ, “ರಾಹುಲ್ ಗಾಂಧಿ ಲೋಕಸಭೆ ಭಾಷಣ ಕಟ್ ಮಾಡಿ ಬಿಟ್ಟಿದ್ದಾರೆ. ಪ್ಲೈಯಿಂಗ್ ಕಿಸ್ ಮಾಡಿದ್ದಾರೆ ಅಂತ ಸ್ಮೃತಿ ಇರಾನಿ ಆರೋಪ ಮಾಡಿದ್ದಾರೆ. ಅಲ್ಲ, ಸ್ಮೃತಿ ಇರಾನಿಯವರೆ ನೀವು ಎಲ್ಲಿ ಇದ್ರಿ? ನಿಮ್ಮ ಗಂಡ ಯಾರು, ಅವರು ಮೊದಲು ಯಾರಿಗೆ ಗಂಡ ಆಗಿದ್ರು? ಆಮೇಲೆ ನಿಮಗೆ ಹೇಗೆ ಗಂಡ ಆದ್ರು?
ನೀವು ನಿಮ್ಮ ಸ್ನೇಹಿತೆಗೆ ಹೇಗೆ ಮೋಸ ಮಾಡಿದ್ರಿ? ಇಷ್ಟೆಲ್ಲ ಇದ್ದೂ ರಾಹುಲ್ ಗಾಂಧಿ ಮೇಲೆ ಆರೋಪ ಮಾಡ್ತಾ ಇದ್ದಾರೆ. ಬಾಯಿಗೆ ಕೈಯಿಟ್ಟಿದ್ದು ಪ್ಲೈಯಿಂಗ್ ಕಿಸ್ ಅಂತಿರಾ? ಪ್ಲೈಯಿಂಗ್ ಕಿಸ್ ಅಂದ್ರೆ ತುಟಿಗೆ ಕೈ ಮುಟ್ಟಿಸಿ ಉದುವುದು. ಆ ರೀತಿಯಲ್ಲಿ ರಾಹುಲ್ ಗಾಂಧಿ ಊದಿಯೇ ಇಲ್ಲ” ಎಂದು ಸ್ಮೃತಿ ಇರಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.