

ಲಖನೌ: ಪ್ರಚಾರದ ಹುಚ್ಚಿಗೆ ಬಿದ್ದು ರೀಲ್ಸ್ ಮಾಡುವುದು, ಅದಕ್ಕಾಗಿ ಪ್ರಾಣ ಪಣಕ್ಕಿಡುವುದು, ಇನ್ನೊಬ್ಬರ ಪ್ರಾಣ, ಆಸ್ತಿಗೆ ಹಾನಿಯುಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ರೀಲ್ ಮಾಡುವವರ ಹಿಂದೆ ಕಾನೂನು ಹಿಂಬಾಲಿಸುತ್ತದೆ ಎಂಬ ಅರಿವು ಅಂತಹವರಿಗೆ ಇರುವುದಿಲ್ಲ.
ಇದೀಗ ಯುವಕನೊಬ್ಬ ಬೈಕ್ನಲ್ಲಿ ಅಪಾಯಕಾರಿ ಸ್ಟಂಟ್ಗಳನ್ನು ಪ್ರದರ್ಶಿಸಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ ಓಡಿಸುತ್ತಿರುವ ಯುವಕ ಕೈಯಲ್ಲಿ ಗನ್ ಹಿಡಿದು ಅಪಾಯಕಾರಿ ಸ್ಟಂಟ್ಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೆ ಕೈಯಲ್ಲಿ ಗನ್ ಹಿಡಿದು ಗಾಇಡ ಓಡಿಸುವ ವೇಳೆ ಪೋಸ್ ನೀಡಿದ್ದು, ಗಾಡಿಯ ನಂಬರ್ ಪ್ಲೇಟ್ ಬದಲಿಗೆ ಮಹಾಕಾಲ್ ಎಂಬ ಬೋರ್ಡ್ಅನ್ನು ನೇತು ಹಾಕಿರುವುದನ್ನು ಕಾಣಬಹುದಾಗಿದೆ.
ಇತ್ತ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಪೊಲೀಸರು ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕ ಹಾಗೂ ಬೈಕ್ಅನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯುವಕ ಹಾಗೂ ಸ್ಟಂಟ್ ಮಾಡಲು ಬಳಸಿದ್ದ ಬೈಕ್ಅನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.