ಬಿಸಿಗಾಳಿ ಹಿನ್ನೆಲೆ ತೆಲಂಗಾಣದಲ್ಲಿ ಮತದಾನ ಸಮಯ ವಿಸ್ತರಿಣೆ!

v
Published on

ಹೈದರಾಬಾದ್: ತೆಲಂಗಾಣದಲ್ಲಿ ಬಿಸಿಗಾಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಳ ಮಾಡಿ ಬುಧವಾರ ಅಧಿಸೂಚನೆ ಹೊರಡಿಸಿದೆ.

ಹೀಗಿರುವ ಮತದಾನದ ಅವಧಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆಯನ್ನು ವಿಸ್ತರಿಸಲಾಗಿದೆ. ಪರಿಷ್ಕೃತ ಅವಧಿ ಅನ್ವಯ ಬೆಳಗ್ಗೆ 7 ರಿಂದ ಸಂಜೆ ಸಂಜೆ 6 ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತೆಲಂಗಾಣದ 17 ಲೋಕಸಭಾ ಕ್ಷೇತ್ರಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ.

17 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 106 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಬುಧವಾರ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.  ಆದರೆ ಇದರ ಹಿಂದಿನ ಮಾಹಿತಿ ಪ್ರಕಾರ  ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲಿ ಸಂಜೆ 6 ಗಂಟೆಯವರೆಗೆ ಮತದಾನ ನಡೆಯುವುದಾಗಿ ತಿಳಿಸಲಾಗಿತ್ತು. ಆದರೆ ಈಗ ಮತದಾನವು ಸಂಜೆ 5 ಗಂಟೆಗೆ ಮುಕ್ತಾಯಗೊಳ್ಳುವ ಬದಲು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ.

ಕರೀಂನಗರ, ನಿಜಾಮಾಬಾದ್, ಜಹೀರಾಬಾದ್, ಮೇದಕ್, ಮಲ್ಕಾಜ್‌ಗಿರಿ, ಸಿಕಂದರಾಬಾದ್, ಹೈದರಾಬಾದ್, ಚೆವೆಲ್ಲಾ, ಮಹಬೂಬ್‌ನಗರ, ನಾಗರಕರ್ನೂಲ್ (ಎಸ್‌ಸಿ), ನಲ್ಗೊಂಡ ಮತ್ತು ಭೋಂಗಿರ್ ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಅದಿಲಾಬಾದ್ ಲೋಕಸಭಾ ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳು, ಪೆದ್ದಪಲ್ಲಿಯ ಮೂರು ಕ್ಷೇತ್ರಗಳು, ವಾರಂಗಲ್ (ಎಸ್‌ಸಿ) ಕ್ಷೇತ್ರಗಳ ಆರು, ಮಹಬೂಬಾಬಾದ್ (ಎಸ್‌ಟಿ) ಕ್ಷೇತ್ರಗಳ ಮೂರು ಮತ್ತು ಖಮ್ಮಂ ಲೋಕಸಭಾ ಕ್ಷೇತ್ರದ ಐದು ಕ್ಷೇತ್ರಗಳಲ್ಲಿಯೂ ಪರಿಷ್ಕೃತ ನಿಮಯ ಅನ್ವಯವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದಲ್ಲಿ ಬಿಸಿ ಗಾಳಿ ಹೆಚ್ಚಾಗಿರುವುದರಿಂದ ಮತದಾನದ ಮೇಲಿನ ಪರಿಣಾಮ ಕುರಿತು ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಲು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ತೆಲಂಗಾಣದ ಮುಖ್ಯ ಚುನಾವಣಾಧಿಕಾರಿಯವರ ವಿನಂತಿ ಮೇರೆಗೆ ಆಯೋಗ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net