

Lowest score : ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಗಳಿಸಿದ ತಂಡವೆಂಬ ಅಪಖ್ಯಾತಿಗೆ ಐವರಿ ಕೋಸ್ಟ್ ಗುರಿಯಾಗಿದೆ. ಟಿ20 ವಿಶ್ವಕಪ್-2026 ಆಫ್ರಿಕಾದ ಉಪ-ಪ್ರಾದೇಶಿಕ ಅರ್ಹತಾ ಪಂದ್ಯಗಳ ಭಾಗವಾಗಿ ನೈಜೀರಿಯಾ ವಿರುದ್ಧ ನಿನ್ನೆ (ನ.24) ನಡೆದ ಪಂದ್ಯದಲ್ಲಿ ಐವರಿ ಕೋಸ್ಟ್ ಕೇವಲ 7 ರನ್‌ಗಳಿಗೆ ಆಲೌಟ್ ಆಯಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಇದಕ್ಕೂ ಮೊದಲು, ಕಡಿಮೆ ಟಿ20 ಸ್ಕೋರ್ ಮಾಡಿದ ದಾಖಲೆ ಇಸ್ಲೇ ಆಫ್ ಮ್ಯಾನ್ ಹಾಗೂ ಮಂಗೋಲಿಯಾ ತಂಡಗಳ ಹೆಸರಿನಲ್ಲಿತ್ತು. ಈ ಹಿಂದೆ ಈ ಎರಡು ತಂಡಗಳು 10 ರನ್‌ಗಳಿಗೆ ಆಲೌಟ್ ಆಗಿದ್ದವು. ಇಸ್ಲೇ ಆಫ್ ಮ್ಯಾನ್ ತಂಡ 2023ರಲ್ಲಿ ಸ್ಪೇನ್ ವಿರುದ್ಧ 10 ರನ್ ಕಲೆಹಾಕಿತ್ತು. ಅದೇ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮಂಗೋಲಿಯಾ ತಂಡ ಸಿಂಗಾಪುರ್ ವಿರುದ್ಧ 10 ರನ್ಗೆ ಆಲೌಟ್ ಆಗಿತ್ತು.
ಇನ್ನು ನೈಜೀರಿಯಾ ಮತ್ತು ಐವರಿ ಕೋಸ್ಟ್ ನಡುವಿನ ಪಂದ್ಯದ ವಿಷಯಕ್ಕೆ ಬಂದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನೈಜೀರಿಯಾ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 271 ರನ್‌ಗಳ ಬೃಹತ್ ಸ್ಕೋರ್ ಮಾಡಿತು. ವಿಕೆಟ್ ಕೀಪರ್ ಸೆಲಿಮ್ ಸಲೋ ಅವರ ವಿಧ್ವಂಸಕ ಶತಕ ( 112 ರನ್, 53 ಎಸೆತ, 13 ಬೌಂಡರಿ ಹಾಗೂ 2 ಸಿಕ್ಸರ್) ದಿಂದಾಗಿ ನೈಜೀರಿಯಾ ತಂಡ ದೊಡ್ಡ ಮೊತ್ತವನ್ನು ಪೇರಿಸಿತು.
ನೈಜೀರಿಯಾ ಇನಿಂಗ್ಸ್‌ನಲ್ಲಿ ಐಸಾಕ್ ಒಕ್ಪೆ (23 ಎಸೆತಗಳಲ್ಲಿ ಔಟಾಗದೆ 65) ಮತ್ತು ಸುಲೇಮಾನ್ (29 ಎಸೆತಗಳಲ್ಲಿ 50 ರನ್) ಅದ್ಭುತ ಅರ್ಧಶತಕ ಗಳಿಸಿದರು. ಐವರಿ ಕೋಸ್ಟ್ ಬೌಲರ್‌ಗಳಲ್ಲಿ ಪಂಬಾ ಡಿಮಿಟ್ರಿ ಮತ್ತು ವಿಲ್‌ಫ್ರೆಡ್ ಟ್ಯಾಲೊ ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬ ಬೌಲರ್ ವಿಕೆಟ್ ಪಡೆಯಲಿಲ್ಲ.
ಇದಾದ ಬಳಿಕ ಬೃಹತ್ ಗುರಿಯತ್ತ ಸಾಗಿದ ಐವರಿ ಕೋಸ್ಟ್ ಕೇವಲ 7.3 ಓವರ್‌ಗಳಲ್ಲಿ 7 ರನ್‌ಗಳಿಗೆ ಆಲೌಟಾಯಿತು. ಇದರಿಂದಾಗಿ ನೈಜೀರಿಯಾ ತಂಡ 264 ರನ್‌ಗಳ ಬೃಹತ್ ಅಂತರದಿಂದ ಜಯ ಸಾಧಿಸಿತು. ಐವರಿ ಕೋಸ್ಟ್ ಇನ್ನಿಂಗ್ಸ್‌ನಲ್ಲಿ ಆರು ಬ್ಯಾಟ್ಸ್‌ಮನ್‌ಗಳು ಡಕ್ ಆಗಿದ್ದರೆ, ಮೂವರು ಬ್ಯಾಟ್ಸ್‌ಮನ್‌ಗಳು ತಲಾ ಒಂದು ರನ್ ಗಳಿಸಿದರು. ಆರಂಭಿಕ ಆಟಗಾರ ಮೊಹಮ್ಮದ್ ಗಳಿಸಿದ ನಾಲ್ಕು ರನ್‌ಗಳು ಗರಿಷ್ಠ ಸ್ಕೋರ್ ಆಯಿತು. ಈ ತಂಡದ ಇನ್ನಿಂಗ್ಸ್‌ನಲ್ಲಿ ಒಂದೇ ಒಂದು ಬೌಂಡರಿ ಕೂಡ ಬರಲಿಲ್ಲ. (ಏಜೆನ್ಸೀಸ್)