ಅನ್ಯಜಾತಿಯ ಹುಡುಗನ ಜೊತೆ ಪ್ರೀತಿ; ಮನೆಯೊಳಗೆ ಮಗಳನ್ನು ಗುಂಡಿಕ್ಕಿ ಕೊಂದು, ಶವ ನದಿಗೆ ಎಸೆದ ತಂದೆ| Dishonour killing

Untitled design - 2025-09-29T110746.628
Published on

Dishonour killing: ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಮರ್ಯಾದೆಗೇಡು ಹತ್ಯೆಯೊಂಂದು ನಡೆದಿದೆ. ಮಗಳು ಅನ್ಯ ಜಾತಿಯ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂಬ ಶಂಕೆ ಮೇಲೆ ಆಕೆಯ ತಂದೆಯೇ ಮನೆಯಲ್ಲಿ ಗುಂಡಿಕ್ಕಿ ಕೊಂದಿದ್ದು, ಬಳಿಕ ಆಕೆಯ ಶವವನ್ನು ನದಿಗೆ ಎಸೆದಿರುವ ಘಟನೆ ಶನಿವಾರ (ಸೆ. 27) ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೃತಳನ್ನು 17 ವರ್ಷದ ದಿವ್ಯಾ ಸಿಕರ್ವಾರ್ ಎಂದು ಗುರುತಿಸಲಾಗಿದೆ. ದಿವ್ಯಾ ಮೇಲ್ಜಾತಿಯ ಕ್ಷತ್ರಿಯ ಕುಟುಂಬಕ್ಕೆ ಸೇರಿದವಳಾಗಿದ್ದು, ಹಿಂದುಳಿದ ಜಾತಿಯ ಯುವಕನ ಜೊತೆ ಸ್ನೇಹ ಬೆಳೆಸಿದ್ದಳು. ಈ ಸ್ನೇಹವು ದಿವ್ಯಾಳ ಕುಟುಂಬವನ್ನು ಕೆರಳಿಸಿದ್ದು, ಮಾರ್ಯಾದೆ ಹೋಗುತ್ತದೆ ಎಂದು ಮನೆಯೊಳಗೆ ದಿವ್ಯಾಳನ್ನು ಗುಂಡಿಕ್ಕಿ ಕೊಲ್ಲಲಾಗಿದೆ ಎನ್ನಲಾಗಿದೆ.

ಪೊಲೀಸ್ ತನಿಖೆಯಲ್ಲಿ ಮೃತಳ ತಂದೆ ಭರತ್ ಸಿಕರ್ವಾರ್, ಶವವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ, ಕಲ್ಲಿಗೆ ಕಟ್ಟಿ, ಮನೆಯಿಂದ 30 ಕಿ.ಮೀ ದೂರದಲ್ಲಿರುವ ಕುನ್ವಾರಿ ನದಿಗೆ ಎಸೆದಿದ್ದಾನೆ ಎಂದು ತಿಳಿದು ಬಂದಿದೆ.  ಮೊದಲಿಗೆ ದಿವ್ಯಾ ಪೋಷಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದು, ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ಹೇಳಿದ್ದಾರೆ. ನಂತಹ ಆತ್ಮಹತ್ಯೆ ಎಂದು ಹೇಳಿದ್ದಾರೆ. ಕೊಳೆತ ದೇಹವನ್ನ ಪರೀಕ್ಷಿಸಿದ ವಿಧಿ ವಿಜ್ಞಾನ ತಜ್ಞರು ತಲೆಯೊಳಗೆ ಗುಂಡೇಟಿನ ಗಾಯವಾಗಿರುವುದನ್ನು ಪತ್ತೆ ಹಚ್ಚಿದ್ದಾರೆ.

ಇನ್ನೊಂದು, ದಿವ್ಯಾಳ ಕಿರಿಯ ಸಹೋದರ ಮತ್ತು ಸಹೋದರಿ ಇಬ್ಬರೂ ಅಪ್ರಾಪ್ತರಾಗಿದ್ದು, ಘಟನೆ ನಡೆದ ರಾತ್ರಿಯಿಂದ ಕಾಣೆಯಾಗಿದ್ದಾರೆ. ಈ ನಾಪತ್ತೆ ಮತ್ತು ಪೋಷಕರು ಪದೇ ಪದೇ ಹೇಳಿಕೆಗಳನ್ನು ಬದಲಾಯಿಸಿದ್ದು, ಕೊಲೆ ಪ್ರಕರಣವನ್ನು ಬಯಲಿಗೆಳೆಯಲು ಪೊಲೀಸರಿಗೆ ಸಹಾಯ ಮಾಡಿದೆ.

ಈ ಕುರಿತು ಮಾತನಾಡಿರುವ ಎಎಸ್​​ಪಿ ಸುರೇಂದ್ರ ಪಾಲ್ ಸಿಂಗ್ ದಾಬರ್, ದಿವ್ಯಾ ಅವರ ಶವವನ್ನು ಕುನ್ವರಿ ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಿಧಿವಿಜ್ಞಾನ ವರದಿಯ ನಂತರವೇ ನಾವು ಸಾವಿನ ಕಾರಣವನ್ನು ಖಚಿತಪಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net