

ಮುಂಬೈ: ಪ್ರೀತಿಯಲ್ಲಿ ಮುಳುಗಿದವರಿಗೆ ಜಗತ್ತೇ ಕಾಣಲ್ಲ ಅಂತಾರೆ. ಇನ್ನು ಕರೊನಾ ಖಯಾಲಿ ಬರುತ್ತಾ ? ಅದಕ್ಕಾಗೇ ಯುವ ಜೋಡಿಗಳಿಗೆ ವಾಲೆಂಟೈನ್ಸ್ ಡೇ ಅಬ್ಬರದಲ್ಲಿ ಕರೊನಾ ಮುನ್ನೆಚ್ಚರಿಕೆಗಳನ್ನು ಮರೆಯದಿರಿ ಎಂದು ಮುಂಬೈ ಪೊಲೀಸರು ಬಿನ್ನಹ ಮಾಡಿಕೊಂಡಿದ್ದಾರೆ. ಟ್ವಿಟರ್ನಲ್ಲಿ ವಿಭಿನ್ನ ರೀತಿಯಾಗಿ ಮೂಡಿಬಂದಿರುವ ಪೊಲೀಸರ ಅಹವಾಲು ನೆಟ್ಟಿಗರ ಗಮನ ಸೆಳೆದಿದೆ.
'ಈ ವಾಲೆಂಟೈನ್ಸ್ ಡೇ ನಮಗೆ ಬೇಕಿರುವುದು ಎಂದರೆ ಪ್ರೀತಿ, ಒಂದು ಮಾಸ್ಕ್ ಮತ್ತು 6 ಅಡಿ ಅಂತರ' ಎಂದು ಬರೆದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಆಕರ್ಷಕ ಜಿಫ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಾಸ್ಕ್ ಧರಿಸಿರುವ ಹುಡುಗ ಮತ್ತು ಹುಡುಗಿಯ ಮಧ್ಯ ಒಂದು ಲವ್ ಶೇಪ್ ಇರುತ್ತದೆ. ಕ್ರಮೇಣ ಹೆಚ್ಚು ಲವ್ ಶೇಪ್ಗಳು ಬಂದು ಅಂತರ ಮೂಡಿಸುತ್ತವೆ. ಇದರೊಂದಿಗೆ "ಅಂತರವು ಪ್ರೀತಿ ಹೆಚ್ಚು ಬಲವಾಗಿ ಬೆಳೆಯುವಂತೆ ಮಾಡುತ್ತದೆ" ಎಂದು ಸೂಚಿಸುವ ಅಡಿಬರಹ ಗೋಚರಿಸುತ್ತದೆ!
ಮುಂಬೈ ನಗರ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮತ್ತೊಂದು ಆಕರ್ಷಕ ಪೋಸ್ಟ್ ಇದೆ. ಜೋಡಿಗಳಿಗೆ "ಸುರಕ್ಷತೆಯನ್ನು ಮೊದಲು ಕಾಪಾಡಿಕೊಳ್ಳಿ" ಎಂದು ಈ ಸಂದೇಶ ಹೇಳುತ್ತದೆ. 'ಐ ಲವ್ ಯೂ' ಎಂಬ ಮೂರು ಪದಗಳ ಬದಲಿಗೆ 'ಸೇಫ್ಟಿ ಕಮ್ಸ್ ಫಸ್ಟ್' ಎಂಬ ಮೂರು ಪದಗಳನ್ನು ಪೇರಿಸಿದ್ದಾರೆ! ಚಿತ್ರದಲ್ಲಿ ಕುರ್ಚಿಗಳ ಮೇಲೆ ಕುಳಿತಿರುವ ಜೋಡಿಯ ಮಧ್ಯೆ ಒಂದು ಮಾಸ್ಕ್ ಇದೆ. ಜೊತೆಗೆ ಢಾಯಿ ಅಕ್ಷರ್ ಪ್ರೇಮ್ ಕೆ, ದೋ ಗಜ್ ಸೇಫ್ಟಿ ಕೇ ಅಂತ ಮುದ್ರಿಸಲಾಗಿದೆ.(ಏಜೆನ್ಸೀಸ್)