ಪ್ರವೀಣ್​ಗೆ 60 ಪ್ರಪೋಸಲ್!; ಲವ್ 360 ಟ್ರೇಲರ್ ಬಿಡುಗಡೆ

Rachana Inder
Published on

ಬೆಂಗಳೂರು: ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರತಂಡ ಸಂಭ್ರಮದಲ್ಲಿದೆ. ಚಿತ್ರದ ‘ಜಗವೇ ನೀನು...’ ಹಾಡು ಹಿಟ್ ಲಿಸ್ಟ್ ಸೇರಿರುವುದು ಅದಕ್ಕೆ ಕಾರಣ. ಇದೇ ಖುಷಿಯಲ್ಲಿ ಇತ್ತೀಚೆಗಷ್ಟೇ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಶಾಂಕ್, ‘ಯೂಟ್ಯೂಬ್​ನಲ್ಲಿ ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡಿರುವ ‘ಜಗವೇ ನೀನು ...’ ಹಾಡಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ನಾವು ರಾಜ್ಯದ ಹಲವು ಕಾಲೇಜುಗಳಿಗೆ ಪ್ರಚಾರಕ್ಕೆ ತೆರಳಿದ್ದೆವು. ಎಲ್ಲಾ ಕಡೆಗಳಲ್ಲೂ ಒಳ್ಳೆಯ ಮಾತುಗಳು ಕೇಳಿಬರುತ್ತಿವೆ. ಮೊದಲು ಹಾಡುಗಳನ್ನು ನೋಡಿ ಜನ ಚಿತ್ರಮಂದಿರಕ್ಕೆ ಬರುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಹಾಗಾಗುತ್ತಿರಲಿಲ್ಲ. ಈಗ ನಮ್ಮ ಹಾಡು ಮತ್ತೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಭರವಸೆಯಿದೆ’ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ನಾಯಕ ಪ್ರವೀಣ್, ‘ನನಗೆ ಇಷ್ಟು ವರ್ಷಗಳಲ್ಲಿ ಮೂರ್ನಾಲ್ಕು ಹುಡುಗಿಯರು ಪ್ರಪೋಸ್ ಮಾಡಿರಬಹುದು. ಆದರೆ, ಮೊನ್ನೆ ಪ್ರಚಾರಕ್ಕಾಗಿ ಹೊಸಪೇಟೆಗೆ ಹೋದಾಗ ಒಂದೇ ದಿನ 60-70 ಹುಡುಗಿಯರು ಪ್ರಪೋಸ್ ಮಾಡಿದರು. ಅಷ್ಟರ ಮಟ್ಟಿಗೆ ‘ಜಗವೇ ನೀನು ...’ ಹಾಡು ಹಿಟ್ ಆಗಿದೆ. ಅದಕ್ಕೆಲ್ಲಾ ಕಾರಣ ನೀವೇ ಸರ್’ ಎಂದು ನಿರ್ದೇಶಕ ಶಶಾಂಕ್ ಅವರಿಗೆ ಧನ್ಯವಾದ ತಿಳಿಸಿದರು.

ಬಳಿಕ ಮಾತನಾಡಿದ ನಾಯಕಿ ರಚನಾ ಇಂದರ್, ‘ಕೆಲವು ಕಾಲೇಜುಗಳಿಗೆ ಪ್ರಚಾರಕ್ಕೆ ಹೋದಾಗ ಹಲವು ವಿದ್ಯಾರ್ಥಿಗಳು ಪೂರ್ತಿ ಹಾಡನ್ನು ಹಾಡಿದರು. ಶಿವರಾಜಕುಮಾರ್ ಅವರು ಚಿತ್ರದ ಬಗ್ಗೆ ಮೆಚ್ಚುಗೆಯ ಮಾತಗಳನ್ನಾಡಿರುವುದು ಖುಷಿ ನೀಡಿದೆ’ ಎಂದರು. ‘ಲವ್ 360’ ಚಿತ್ರದಲ್ಲಿ ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರಿ, ಸುಕನ್ಯಾ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದ್ದು, ಇದೇ ಆಗಸ್ಟ್ 19ರಂದು ‘ಲವ್ 360’ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net