ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಕಿನ್ನಿಗೋಳಿ ಸಮೀಪದ ಹೊಸಕಾವೇರಿಯಲ್ಲಿ ಕೆಂಪು ಕಲ್ಲು ಹೇರಿಕೊಂಡು ಹೋಗುತ್ತಿದ್ದ ಲಾರಿಯೊಂದು ರಿಕ್ಷಾಗೆ ಡಿಕ್ಕಿ ಹೊಡೆದಿದೆ.
ಕಿನ್ನಿಗೋಳಿ ಕಡೆಯಿಂದ ಮೂಲ್ಕಿ ಕಡೆಗೆ ಸಂಚರಿಸುತ್ತಿದ್ದ ಲಾರಿ ಹೊಸಕಾವೇರಿ ಬಳಿ ಅಗಲ ಕಿರಿದಾದ ರಸ್ತೆಯಲ್ಲಿ ಮತ್ತೊಂದು ವಾಹನಕ್ಕೆ ಸೈಡ್ ನೀಡಲು ಮುಂಭಾಗದಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಉಲ್ಲಂಜೆ ನಿವಾಸಿ ವಿಜಯ ಆಚಾರ್ಯ ಗಂಭೀರ ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಕಿನ್ನಿಗೋಳಿ ಗೋಳಿಜೋರ ನಿವಾಸಿ ಅಕ್ಷಿತಾ ಹಾಗೂ ಅಶ್ಮಿತಾ ರಿಕ್ಷಾದಲ್ಲಿ ಸಿಕ್ಕಿಹಾಕಿಕೊಂಡಿದ್ದು ಸಾರ್ವಜನಿಕರ ಸಹಾಯದಿಂದ ಹೊರಕ್ಕೆ ತೆಗೆಯಲಾಯಿತು. ಇಬ್ಬರೂ ಅಲ್ಪಸ್ವಲ್ಪ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ರಸ್ತೆಯ ಪಕ್ಕದಲ್ಲಿ ಹೂವಿನ ಅಂಗಡಿ ಇದ್ದು ಹೂ ಖರೀದಿಗೆ ವಾಹನಗಳು ನಿಲ್ಲಿಸುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಹಲವು ಸಮಯದಿಂದ ಆರೋಪ ಕೇಳಿಬಂದಿತ್ತು. ಈ ರಸ್ತೆ ಸಮೀಪ ಹಿಂದೆಯೂ ಹಲವಾರು ಸಣ್ಣಪುಟ್ಟ ಅಪಘಾತಗಳು ನಡೆದಿದ್ದು, ಈ ಬಗ್ಗೆ ಸ್ಥಳೀಯ ನಿವಾಸಿ ಸುಬೇದಾರ್ ಪದ್ಮನಾಭ ಜಿಲ್ಲಾಧಿಕಾರಿ, ಸ್ಥಳೀಯ ಪಟ್ಟಣ ಪಂಚಾಯಿತಿ ಕಚೇರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.