ಹೆದ್ದಾರಿಯಲ್ಲಿ ಲಾರಿ-ಬಸ್ ಡಿಕ್ಕಿ, ಚಾಲಕರು ಸೇರಿ ನಾಲ್ವರಿಗೆ ಗಾಯ

accident
Published on

ಕಾಸರಗೋಡು: ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ. ಬಸ್ ಚಾಲಕ ಅಶ್ರಫ್, ಲಾರಿ ಚಾಲಕ ಹಾಗೂ ಇಬ್ಬರು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಬೇರೊಂದು ವಾಹನವನ್ನು ಹಿಂದಿಕ್ಕಿ ಸಾಗುವ ಭರದಲ್ಲಿ ಲಾರಿಯು, ಪ್ರಯಾಣಿಕರನ್ನು ಇಳಿಸುತ್ತಿದ್ದ ಬಸ್ಸಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಬಸ್ಸಿನೊಳಗೆ ಸಿಲುಕಿದ್ದ ಚಾಲಕ ಅಶ್ರಫ್ ಅವರನ್ನು ಸ್ಥಳೀಯ ನಿವಾಸಿಗಳು ಸೇರಿ ಹೊರ ತೆಗೆದಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ ರಸ್ತೆಮಧ್ಯೆ ಸಿಲುಕಿಕೊಂಡಿದ್ದ ವಾಹನಗಳನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.

ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೂರ್ಣಗೊಂಡ ಮಾರ್ಗದಲ್ಲಿ ಎರಡೂ ಕಡೆಯ ವಾಹನಗಳಿಗೆ ಚಲಿಸಲು ಅವಕಾಶ ಕೊಡಲಾಗಿತ್ತು. ಕಾಸರಗೋಡು ಕಡೆಯಿಂದ ಅತಿ ವೇಗದಲ್ಲಿ ಬಂದ ಲಾರಿ ಮುಂದಿದ್ದ ಬಸ್ಸನ್ನು ಓವರ್‌ಟೇಕ್ ಮಾಡಲು ಹೋಗಿ ಎದುರು ಆಗ ತಾನೇ ಬಂದು ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಖಾಸಗಿ ಬಸ್ಸಿಗೆ ಮುಖಾಮುಖಿ ಅಪ್ಪಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net