ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಹೊಸ ಸಿನಿಮಾವನ್ನು ಹೊಂಬಾಳೆ ಫಿಲಂಸ್ ಘೋಷಣೆ ಮಾಡಿದೆ. ಈ ಮೂಲಕ ಸಲಾರ್ ಶೀರ್ಷಿಕೆಯ ಸಿನಿಮಾದಿಂದ ಪ್ರಭಾಸ್ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ನಾಯಕರಾಗುತ್ತಿದ್ದಾರೆ. ಪೋಸ್ಟರ್ ಮತ್ತು ಶೀರ್ಷಿಕೆಯನ್ನು ಬಿಡುಗಡೆ ಮಾಡಿಕೊಂಡಿರುವ ತಂಡ, ಈ ಚಿತ್ರವನ್ನು ಇಂಡಿಯನ್ ಸಿನಿಮಾ ಎಂದು ಘೋಷಿಸಿಕೊಂಡಿದೆ. ಇದೇ ಸಿನಿಮಾದ ಭಾಗವಾಗಲು ಕಲಾವಿದರಿಗೆ ಆಡಿಷನ್ ಸಹ ಕರೆದಿತ್ತು ತಂಡ.
ಇದನ್ನೂ ಓದಿ: ರಾವಣನ ಬಗ್ಗೆ ಮಾತನಾಡಿದ್ದಕ್ಕೆ ಸೈಫ್ ಮೇಲೆ ಕೇಸ್!
ಹೌದು, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್, ಕನ್ನಡದ ಜತೆಗೆ ಭಾರತದ ಹತ್ತಾರು ಭಾಷೆಗಳಲ್ಲಿ ತೆರೆಗೆ ಬರಲಿದೆ. 100 ಕೋಟಿಗೂ ಅಧಿಕ ಬಜೆಟ್ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಎಲ್ಲ ಭಾಷಿಕರಿಗೂ ಈ ಚಿತ್ರದಲ್ಲಿ ನಟಿಸುವ ಅವಕಾಶವನ್ನು ನಿರ್ಮಾಣ ಸಂಸ್ಥೆ ಮಾಡಿಕೊಡುತ್ತಿದೆ. ಅದರಂತೆ ಮಂಗಳವಾರ ಹೈದರಾಬಾದ್ನಲ್ಲಿ ಆಡಿಷನ್ ಕರೆಯಲಾಗಿತ್ತು, ಸಾವಿರಾರು ಮಂದಿ ಆಡಿಷನ್ನಲ್ಲಿ ಭಾಗವಹಿಸಿದ್ದಾರೆ. ಆ ಆಡಿಷನ್ನ ಒಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಪೊಲೀಸ್ ಭದ್ರತೆಯಲ್ಲಿಯೇ ಈ ಚಿತ್ರದ ಆಡಿಷನ್ ಮಾಡಲಾಗಿದೆ.
ಇದನ್ನೂ ಓದಿ: ಕನ್ನಡದ ಸಾಧಕನ ಬಯೋಪಿಕ್, ‘ದಿ ಬ್ರಿಡ್ಜ್ ಮ್ಯಾನ್’
ಮಂಗಳವಾರ ಬೆಳಗ್ಗೆ 9ರಿಂದ 6ರವರೆಗೂ ಆಡಿಷನ್ ಪ್ರಕ್ರಿಯೆ ನಡೆದಿದೆ. ಅದೇ ರೀತಿ ಬೆಂಗಳೂರು ಮತ್ತು ಚೆನ್ನೈನಲ್ಲಿಯೂ ಆಡಿಷನ್ ನಡೆಯಲಿದೆ. ವಿಜಯ್ ಕಿರಗಂದೂರು ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ಸ್ಟಾರ್ ಕಲಾವಿದರ ದಂಡೇ ಚಿತ್ರದಲ್ಲಿರಲಿದೆ. ಸದ್ಯ ಪ್ರಭಾಸ್ ಕೈಯಲ್ಲಿ ಪ್ರಸ್ತುತ ಮೂರು ಸಿನಿಮಾಗಳಿವೆ. ಅವುಗಳಲ್ಲಿ ರಾಧೆ ಶ್ಯಾಮ್ ಬಹುತೇಕ ಮುಕ್ತಾಯದ ಹಂತದಲ್ಲಿದ್ದು, ಅದಾದ ಬಳಿಕ ಸಲಾರ್ ಚಿತ್ರ ಕೈಗೆತ್ತಿಕೊಳ್ಳಲಿದ್ದಾರೆ. ಜತೆಯಲ್ಲಿ ಆದಿಪುರುಷ್ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾದ ಭಾಗವಾಗಲಿದ್ದಾರೆ.