

Lokah: ಬೆಂಗಳೂರಿನ ಸಂಸ್ಕೃತಿ ಮತ್ತು ಅಲ್ಲಿನ ಯುವತಿಯರ ಬಗ್ಗೆ ತುಂಬಾ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಮಲಯಾಳಂನ ಲೋಕಃ ಚಾಪ್ಟರ್ 1 ಚಿತ್ರ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರೀ ವಿವಾದಕ್ಕೆ ಗುರಿಯಾಯಿತು. ಇದರ ವಿರುದ್ಧ ಬೆಂಗಳೂರಿನ ಮಂದಿ ತೀವ್ರ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಚಿತ್ರತಂಡ ಕ್ಷಮೆ ಕೂಡ ಕೇಳಿತು. ವಿವಾದ ಹೊರತುಪಡಿಸಿ ನೋಡುವುದಾದರೆ, ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆಯತ್ತ ಸಾಗಿದೆ.
ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್, ಮಲಯಾಳಂ ಸಿನಿಪ್ರಿಯರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉತ್ತಮ ವಿಮರ್ಶೆಗಳನ್ನು ಪಡೆದಿರುವ ಈ ಚಿತ್ರವು, ಬಾಕ್ಸ್ ಆಫೀಸ್ನಲ್ಲಿ ಮೂರನೇ ವಾರವು ಭರ್ಜರಿ ಗಳಿಕೆ ಕಾಣುತ್ತಿದೆ. ಇದು ಚಿತ್ರತಂಡಕ್ಕೆ ಅತೀವ ಸಂತಸ ಮೂಡಿಸಿದೆ. ಆನ್ ಮನೋರಮಾ ವರದಿ ಪ್ರಕಾರ, ಪ್ರಸ್ತುತ ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಎರಡನೇ ಚಿತ್ರ ಇದಾಗಿದೆ.
ಈ ಹಿಂದೆ ಮಾಲಿವುಡ್ನಲ್ಲಿ ಬ್ಲಾಕ್‌ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮಿದ 'ಥುಡರಮ್' ಮತ್ತು 'ಮಂಜುಮ್ಮೆಲ್ ಬಾಯ್ಸ್' ಚಿತ್ರಗಳನ್ನು ಇದೀಗ 'ಲೋಕಃ' ಹಿಂದಿಕ್ಕಿದೆ. ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ 'ಸಕ್ನಿಲ್ಕ್' ಮಾಹಿತಿ ಪ್ರಕಾರ, ಡೊಮಿನಿಕ್ ಅರುಣ್ ನಿರ್ದೇಶನದ ಕಲ್ಯಾಣಿ ಪ್ರಿಯದರ್ಶನ್ ಅಭಿನಯದ ಸೂಪರ್‌ಹೀರೋ ಈ ಚಿತ್ರ, ಕಳೆದ ವರ್ಷ ಬಾಕ್ಸ್ ಆಫೀಸ್ನಲ್ಲಿ ದಾಖಲೆ ನಿರ್ಮಿಸಿದ್ದ ಮಂಜುಮ್ಮೆಲ್ ಬಾಯ್ಸ್ (ಜಾಗತಿಲ 241ಕ್ಕೂ ಅಧಿಕ ಕೋಟಿ ರೂ.) ಗಳಿಕೆಯನ್ನು ಮುರಿದಿದೆ.
ಇದರೊಂದಿಗೆ ಮಾಲಿವುಡ್ ದಿಗ್ಗಜ, ನಟ ಮೋಹನ್ಲಾಲ್ ನಟಿಸಿದ ಸೂಪರ್ಹಿಟ್ 'ಥುಡರಮ್' (ಜಾಗತಿಕ 235ಕ್ಕೂ ಅಧಿಕ ಕೋಟಿ ರೂ.) ಗಳಿಕೆಯನ್ನೂ ಬ್ರೇಕ್ ಮಾಡಿದೆ. ಸತತ ಮೂರನೇ ವಾರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಲೋಕಃ, ಜನರನ್ನು ಥಿಯೇಟರ್, ಮಲ್ಟಿಪ್ಲೆಕ್ಸ್ಗಳತ್ತ ಕೈಬೀಸಿ ಕರೆಯುತ್ತಿರುವುದು ಗಮನಾರ್ಹ.
ತೆರೆಕಂಡ 18ನೇ ದಿನಕ್ಕೆ ಜಾಗತಿಕವಾಗಿ ಬ್ಲಾಕ್‌ಬಸ್ಟರ್ ಆಗಿ ಸದ್ದು ಮಾಡುತ್ತಿರುವ ಲೋಕಃ, ಸುಮಾರು 248ಕ್ಕೂ ಹೆಚ್ಚು ಕೋಟಿ ರೂ. ಬಾಕ್ಸ್ ಆಫೀಸ್ ಗಳಿಕೆಯನ್ನು ಕಂಡಿದೆ. ಶೀಘ್ರದಲ್ಲೇ, 'ಎಂಪುರಾನ್' ಚಿತ್ರದ 267 ಕೋಟಿ ರೂ. ಗಳಿಕೆಯನ್ನೂ ಮುರಿಯುವ ಎಲ್ಲ ಲಕ್ಷಣಗಳಿವೆ. ಚಿತ್ರವು ದೇಶಿಯವಾಗಿ ಸುಮಾರು 140 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ,(ಏಜೆನ್ಸೀಸ್).