ಎಕ್ಸಿಟ್​ ಆಗ್ತೀವಿ ಎಂದವರು ಐಸಿಸಿಗೆ ಹೆದರಿ ದಿಢೀರ್​ ಯೂ-ಟರ್ನ್​! ಪಾಕ್​ ನಾಟಕಗಳು ಒಂದೆರೆಡಲ್ಲ | Asia Cup 2025

ವಿಜಯವಾಣಿ (78)
Published on

Asia Cup 2025: ಸೆ.14ರಂದು ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎದುರು ಮಂಡಿಯೂರಿದ ಪಾಕಿಸ್ತಾನ, ನಮ್ಮ ಆಗ್ರಹಕ್ಕೆ ಐಸಿಸಿ ಸ್ಪಂದಿಸದಿದ್ದರೆ ಏಷ್ಯಾಕಪ್​ ಟೂರ್ನಿಯಿಂದ ಹೊರಹೋಗ್ತೀವಿ ಎಂದಿತ್ತು. ಹೀಗೆ ಹೇಳಿ 24 ಗಂಟೆಗಳು ಸಹ ಕಳೆದಿಲ್ಲ. ಅಷ್ಟು ಬೇಗ ತನ್ನ ನಿರ್ಧಾರವನ್ನು ಬದಲಿಸಿದೆ. ಸದ್ಯ ಇದೇ ಹಲವರ ಟೀಕೆ, ಟಿಪ್ಪಣಿಗೆ ಕಾರಣವಾಗಿದೆ.

ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲುಂಡ ಪಾಕ್​ಗೆ ತಮ್ಮ ದೇಶದಿಂದಲೇ ವ್ಯಾಪಕ ಛೀಮಾರಿ, ಟೀಕೆಗಳು ವ್ಯಕ್ತವಾಯಿತು. ಇದರ ಮಧ್ಯೆ ಪಂದ್ಯಕ್ಕೂ ಮೊದಲು ಮತ್ತು ಗೆದ್ದ ಬಳಿಕ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​, ಎದುರಾಳಿ ತಂಡದ ಆಟಗಾರರೊಂದಿಗೆ ಹಸ್ತಲಾಘವ ಮಾಡಲಿಲ್ಲ. ಈ ನಡೆಯಿಂದ ತೀರ ಅಸಮಾಧಾನಗೊಂಡ ಪಾಕ್​, ಟಾಸ್​ ಸಮಯದಲ್ಲಿ ಎರಡು ತಂಡಗಳ ನಾಯಕರಿಂದ ಕೈಕುಲಕುವ ಸಂಪ್ರದಾಯವನ್ನು ಅಂಪೈರ್​ ಮಾಡಬೇಕಿತ್ತು. ಆದರೆ, ಅವರಿಂದ ಅದು ಆಗಿಲ್ಲ. ಹೀಗಾಗಿ, ಐಸಿಸಿ ಕೂಡಲೇ ಮುಂಬರುವ ಪಂದ್ಯಗಳಿಂದ ಅಂಪೈರ್​ನನ್ನು ಕಿತ್ತುಬಿಸಾಡಬೇಕು ಎಂದು ಆಗ್ರಹಿಸಿತು. ಇದಕ್ಕೆ ಕಿಂಚಿತ್ತು ಒತ್ತುಕೊಡದ ಐಸಿಸಿ, ಪಾಕಿಸ್ತಾನ ಮನವಿಯನ್ನು ಕಡೆಗಣಿಸಿತು.

ಪಂದ್ಯದ ಅಂಪೈರ್​ ಆ್ಯಂಡಿ ಪೈಕ್ರೊಫ್ಟ್ಸ್​ ವಜಾಗೊಳಿಸುವಿಕೆ ಮನವಿಯನ್ನು ಪರಿಗಣಿಸದ ಐಸಿಸಿ ವಿರುದ್ಧ ಕಿಡಿಕಾರಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ, ಇಷ್ಟೆಲ್ಲ ಆದ ಮೇಲೆ ಏಷ್ಯಾಕಪ್​ನಲ್ಲಿ ಮುಂದುವರಿಯಲು ನಮಗೆ ಆಸಕ್ತಿಯಿಲ್ಲ ಎಂದು ತಿಳಿಸಿತು. ಮೊದಲಿಗೆ, ಮುಂಬರುವ ಯುಎಇ ಪಂದ್ಯವನ್ನು ಆಡಲು ಬಯಸುವುದಿಲ್ಲ ಎಂದಿದ್ದ ಪಾಕ್​, ನಂತರದಲ್ಲಿ ಟೂರ್ನಿಯಿಂದ ಹೊರಗುಳಿಯುವುದಾಗಿ ಎಚ್ಚರಿಸಿತು. ಇದೀಗ ಈ ನಿರ್ಧಾರದಿಂದಲೂ ದಿಢೀರ್ ಯೂ-ಟರ್ನ್​ ಹೊಡೆದಿರುವ ಪಿಸಿಬಿ, ಐಸಿಸಿ ವಿಧಿಸುವ ಸಂಭವನೀಯ ನಿರ್ಬಂಧಕ್ಕೆ ಹೆದರಿ, ಹೊರಹೋಗುವ ನಿಲುವನ್ನು ಬದಲಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net