ಬಿಜೆಪಿಯಿಂದ ಏಕಾಂಗಿಯಾಗಿ ಸರ್ಕಾರ ರಚನೆ ಮಾಡೋದು ಕಷ್ಟ: ಮೈತ್ರಿಪಕ್ಷಗಳ ಮೇಲೆ ಅವಲಂಬನೆ

Amit Shah And Modi November 27
Published on

ನವದೆಹಲಿ: ಅಬ್ ಕಿ ಬಾರ್ 400 ಪಾರ್ ಎನ್ನುವ ಮೂಲಕ ಈ ಬಾರಿ ಎನ್​ಡಿಎ ಒಕ್ಕೂಟ 400 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂಬ ಪ್ರಧಾನಿ ಮೋದಿ ಹೇಳಿಕೆ ಹುಸಿಯಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಲೋಕಸಭಾ ಚುನಾವಣಾ ಫಲಿತಾಂಶದ ಸದ್ಯದ ಟ್ರೆಂಡ್​ ನೋಡಿದರೆ ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಮಾಡುವುದು ಕಷ್ಟದಂತೆ ತೋರುತ್ತಿದೆ.

ಸರ್ಕಾರ ರಚಿಸಲು 272 ಸ್ಥಾನಗಳಲ್ಲಿ ಗೆಲ್ಲಬೇಕು. ಆದರೆ, ಬಿಜೆಪಿ ಪಕ್ಷ 236 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಯಾವುದೇ ಪಕ್ಷದ ಬೆಂಬಲ ಇಲ್ಲದೆ ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಲು ಸದ್ಯದ ಲೆಕ್ಕಾಚಾರದ ಪ್ರಕಾರ ಬಿಜೆಪಿಗೆ ಸಾಧ್ಯವಿಲ್ಲ. ತನ್ನ ಮಿತ್ರ ಪಕ್ಷಗಳನ್ನೇ ಬಿಜೆಪಿ ಆಶ್ರಯಿಸಬೇಕಿದೆ. ಬಹುತಮದ ಗುರಿ ದಾಟಲು ಬಿಜೆಪಿಗೆ ಇನ್ನು 36 ಸ್ಥಾನಗಳ ಅವಶ್ಯಕತೆ ಇದೆ. ಈ ಬಾರಿ ಎನ್​ಡಿಎ ಒಕ್ಕೂಟ 300 ದಾಟುವುದು ಕೂಡ ಕಷ್ಟವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅಲ್ಲದೆ, ಎನ್​ಡಿಎ 353 ಕ್ಷೇತ್ರಗಳಲ್ಲಿ ಗೆದ್ದು ಪ್ರಚಂಡ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿತ್ತು. ಆದರೆ, ಈ ಬಾರಿಯ ಫಲಿತಾಂಶ ಬಿಜೆಪಿ ಹಾಗೂ ಎನ್​ಡಿಎ ಒಕ್ಕೂಟಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಮೋದಿ ಹೇಳಿದ 400 ಗಡಿಯಿರಲಿ 300ರ ಗಡಿ ದಾಟುವುದು ಕೂಡ ಅನುಮಾನವಾಗಿದೆ.

ಇನ್ನೊಂದೆಡೆ ಕಾಂಗ್ರೆಸ್​ ಅಚ್ಚರಿಯ ರೀತಿಯಲ್ಲಿ ಪುಟಿದೆದ್ದಿದೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಕೇವಲ 52 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಇಂಡಿ ಒಕ್ಕೂಟ 233 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿಗೆ ಟಕ್ಕರ್​ ಕೊಡುವ ಹಂತಕ್ಕೆ ಬಂದು ನಿಂತಿದೆ. ಒಂದಷ್ಟು ಸ್ಥಾನಗಳು ಹೆಚ್ಚಾದರೂ ಕೂಡ ಫಲಿತಾಂಶ ದಿಕ್ಕೇ ಬದಲಾಗಬಹುದು. ಈಗಾಗಲೇ ಕಾಂಗ್ರೆಸ್​ ಬಿಹಾರದ ಜೆಡಿಯು ಮತ್ತು ಆಂಧ್ರದ ಟಿಡಿಪಿ ಜತೆ ಮಾತುಕತೆ ನಡೆಸಲು ಮುಂದಾಗಿದೆ. ಕಾಂಗ್ರೆಸ್​ ಸಹ ಸರ್ಕಾರ ರಚನೆ ಮಾಡುವ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿರುವಂತೆ ತೋರುತ್ತಿದೆ.

ಮಧ್ಯಾಹ್ನ 13.39ರ ಟ್ರೆಂಡ್​ ಪ್ರಕಾರ ಒಟ್ಟು 545 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ 294ರಲ್ಲಿ ಮತ್ತು ಕಾಂಗ್ರೆಸ್​ 226ರಲ್ಲಿ ಹಾಗೂ ಇತರೆ 20 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 16, ಕಾಂಗ್ರೆಸ್​ 10 ಮತ್ತು ಜೆಡಿಎಸ್​ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net