

ನವದೆಹಲಿ: ಕರೊನಾದಿಂದಾಗಿ ಸಂಕಷ್ಟದಲ್ಲಿರುವ ಸರ್ಕಾರಗಳೇ ನೌಕರರ ಸಂಬಳದಲ್ಲಿ ಕಡಿತ ಮಾಡುತ್ತಿವೆ. ಜತೆಗೆ, ನಿವೃತ್ತರ ಪಿಂಚಣಿಯನ್ನೂ ಪೂರ್ಣವಾಗಿ ಪಾವತಿ ಮಾಡುತ್ತಿಲ್ಲ. ಆದರೆ, ವಿವಿಧ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಶಿಶಿಕ್ಷು ತರಬೇತಿ (ಅಪ್ರೆಂಟಿಸ್ಶಿಪ್) ಪಡೆಯುತ್ತಿರುವ ಅಭ್ಯರ್ಥಿಗಳ ಪೂರ್ಣ ಸ್ಟೈಪಂಡ್ ನೀಡುವಂತೆ ಸರ್ಕಾರ ಸೂಚಿಸಿದೆ.
ಉದ್ಯೋಗಕ್ಕಾಗಿ ಅಗತ್ಯ ಕೌಶಲಾಭಿವೃದ್ಧಿ ಹಾಗೂ ಶಿಕ್ಷಣದ ನಂತರ ಪ್ರಾಯೋಗಿಕ ಅನುಭವಕ್ಕಾಗಿ ದೇಶದ ವಿವಿಧ ಸಂಸ್ಥೆಗಳಲ್ಲಿ ಲಕ್ಷಾಂತರ ಜನರು ಅಪ್ರೆಂಟಿಸ್ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 3 ತಿಂಗಳು, ಆರು ತಿಂಗಳು, ಒಂದು ವರ್ಷ ಹಾಗೂ ಕೆಲವೊಮ್ಮೆ ಇನ್ನೂ ಹೆಚ್ಚಿನ ಅವಧಿಗೆ ಈ ತರಬೇತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ಮಾಸಿಕವಾಗಿ ಸಂಚಿತ ಮೊತ್ತವನ್ನುಗೌರವಧನವಾಗಿ ನೀಡಲಾಗುತ್ತದೆ. ಆದರೆ, ಲಾಕ್ಡೌನ್ ಅವಧಿಯಲ್ಲಿ ಸಂಸ್ಥೆಗಳಲ್ಲಿ ತರಬೇತಿ ಕಾರ್ಯ ನಡೆಯುತ್ತಿಲ್ಲ. ಆದರೆ, ಅವರಿಗೆ ನಿಡಬೇಕಾದ ಸ್ಟೈಪಂಡ್ಅನ್ನು ಪೂರ್ಣ ಪ್ರಮಾಣದಲ್ಲಿ ನೀಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ.
ಸ್ಟೈಪಂಡ್ ನಿರಾಕರಿಸುವಂತಿಲ್ಲ: ರಾಷ್ಟ್ರಿಯ ಶಿಶಿಕ್ಷು ಉತ್ತೇಜನ ಯೋಜನೆ (ಎನ್ಎಪಿಎಸ್) ಅನ್ವಯ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಸ್ಟೈಪಂಡ್ ನಿರಾಕರಿಸುವಂತಿಲ್ಲ ಎಂದು ಕೌಶಲ ಅಭಿವೃದ್ಧಿ ಸಚಿವಾಲಯ ಸ್ಪಷ್ಟಪಡಿಸಿದೆ. ಒಂದು ವೇಳೆ ಮುಷ್ಕರ, ಕಂಪನಿ ಸ್ಥಗಿತ, ಲಾಕೌಟ್, ಬಂದ್ ಕಾರ್ಖಾನೆಯನ್ನು ಮುಚ್ಚಬೇಕಾದ ಸಂದರ್ಭ ಎದುರಾದರೆ ತರಬೇತಿ ಅವಧಿಯನ್ನು ಅಷ್ಟೇ ಪ್ರಮಾಣದಲ್ಲಿ ವಿಸ್ತರಿಸಬೇಕು ಎಂಬುದ್ನನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ. ತರಬೇತಿ ಸ್ಥಗಿತಗೊಂಡ ಅವಧಿಯಲ್ಲೂ ಅಭ್ಯರ್ಥಿಗಳಿಗೆ ಸ್ಟೈಪಂಡ್ ನೀಡಬೇಕು ಅಥವಾ ಗರಿಷ್ಠ ಆರು ತಿಂಗಳವರೆಗೆ ಎರಡರಲ್ಲಿ ಯಾವುದು ಕಡಿಮೆಯೋ ಆ ಅವಧಿಯ ಗೌರವಧನ ಪಾವತಿಸಬೇಕು ಎಂಬುದನ್ನು ನಿಯಮಗಳಲ್ಲಿ ಸ್ಪಷ್ಟಪಡಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಕಾರಣದಿಂದಾಗಿ ಲಾಕ್ಡೌನ್ ಅವಧಿಯ ಸ್ಟೈಪಂಡ್ಅನ್ನು ಆಯಾ ಕಂಪನಿಗಳು ನೀಡಲೇಬೇಕು ಎಂದು ನಿರ್ದೇಶನ ನೀಡಿದೆ. ಸಂಸ್ಥೆಗಳು ಈ ಮೊತ್ತವನ್ನುಸರ್ಕಾರದಿಂದ ಮರುಪಾವತಿ ಮಾಡಿಕೊಳ್ಳಬಹುದು.
ದೇಶದ ಯುವಪೀಳಿಗೆಯ ಆತ್ಮಸ್ಥೈರ್ಯವನ್ನು ಕುಸಿಯಲು ಬಿಡುವುದಿಲ್ಲ. ಸಾಧ್ಯವಾದ ಎಲ್ಲ ರೀತಿಯಿಂದಲೂ ಅವರಿಗೆ ಸಹಾಯ ಮಾಡುತ್ತೇವೆ. ಕರೊನಾ ಲಾಕ್ಡೌನ್ ಅವಧಿಯಲ್ಲೂ ಶಿಶಿಕ್ಷು ತರಬೇತಿಯಲ್ಲಿರುವವರು ತಮ್ಮ ಸ್ಟೈಪಂಡ್ ಪಡೆದುಕೊಳ್ಳುವಂತೆ ನೋಡಿಕೊಳ್ಳುತ್ತೇವೆ ಎಂದು ಕೌಶಲಾಭಿವೃದ್ಧಿ ಸಚಿವ ಮಹೇಂದ್ರನಾಥ ಪಾಂಡೆ ತಿಳಿಸಿದ್ದಾರೆ. ಜತೆಗೆ, ಸಂಕಷ್ಟದ ಸ್ಥಿತಿಯಲ್ಲಿ ಸಂಸ್ಥೆಗಳು ಸರ್ಕಾರದೊಂದಿಗೆ ಪೂರ್ಣ ಬದ್ಧತೆಯನ್ನು ವ್ಯಕ್ತಪಡಿಸುತ್ತಿವೆ. ಸರ್ಕಾರದ ಆಶಯಕ್ಕೆ ಸಂಪೂರ್ಣ ಸಹಕಾರ ನೀಡುತ್ತಿವೆ ಎಂದು ಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)