ಏಪ್ರಿಲ್​ 30 ರವರೆಗೆ ಲಾಕ್​ಡೌನ್​ ವಿಸ್ತರಣೆ: ಒಡಿಶಾ ಮುಖ್ಯಮಂತ್ರಿಯಿಂದ ಆದೇಶ

Lockdown 24 March 20
Published on

ಭುವನೇಶ್ವರ: ದೇಶಾದ್ಯಂತ ಏಪ್ರಿಲ್​ 14ರ ಬಳಿಕವೂ ಲಾಕ್​ಡೌನ್​ ವಿಸ್ತರಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ನಡುವೆ ಒಡಿಶಾ ರಾಜ್ಯಾದ್ಯಂತ ದಿಗ್ಬಂಧನವನ್ನು ಏಪ್ರಿಲ್​ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಲಾಕ್​ಡೌನ್​ ವಿಸ್ತರಿಸಿದ ಮೊದಲ ರಾಜ್ಯ ಎನಿಸಿದೆ. ಜತೆಗೆ, ರಾಜ್ಯದ ಶಾಲಾ-ಕಾಲೇಜುಗಳಿಗೆ ಜೂನ್​ 17ರವರೆಗೆ ರಜೆ ಘೋಷಣೆ ಮಾಡಿದ್ದಾರೆ.

ರಾಜ್ಯ ಜನರ ಪ್ರಾಣ ಕಾಪಾಡುವುದು ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಲಾಕ್​ಡೌನ್​ ವಿಸ್ತರಿಸುವುದಾಗಿ ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಘೋಷಿಸಿದ್ದಾರೆ. ಜತೆಗೆ, ರಾಜ್ಯದಲ್ಲಿ ವಿಮಾನ ಹಾಗೂ ರೈಲು ಸಂಚಾರವನ್ನು ಆರಂಭಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೇ, ದೇಶಾದ್ಯಂತವೂ ದಿಗ್ಬಂಧನವನ್ನು ಇನ್ನೂ ಎರಡು ವಾರಗಳ ಕಾಲ ವಿಸ್ತರಿಸುವಂತೆ ಕೋರಿದ್ದಾರೆ.

ಒಡಿಶಾದಲ್ಲಿ ಮಾತ್ರ 15ರಂದು ಮೊದಲ ಕರೊನಾ ಪ್ರಕರಣ ವರದಿಯಾಗಿದ್ದರೆ, ಈವರೆಗೆ ಸೋಂಕಿತರ ಸಂಖ್ಯೆ 42ಕ್ಕೆ ತಲುಪಿದೆ. ಒಬ್ಬರು ಕೋವಿಡ್​-19 ನಿಂದಾಗಿ ಮೃತಪಟ್ಟಿದ್ದಾರೆ.

ರಾಜಧಾನಿ ಭುವನೇಶ್ವರದಲ್ಲಿ 18 ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾದ ಹೌಸಿಂಗ್​ ಕಾಂಪ್ಲೆಕ್ಸ್​ ಒಳಗೊಂಡ ಒಂದೂವರೆ ಕಿ.ಮೀ ಸುತ್ತಳತೆ ಪ್ರದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿತ್ತು. ಮೊದಲ ಸಾವು ವರದಿಯಾದ ಬಳಿಕ ರಾಜಧಾನಿಯ ಕೆಲ ಪ್ರದೇಶಗಳಿಗೂ ಇದನ್ನು ವಿಸ್ತರಿಸಲಾಗಿತ್ತು. ಇದಲ್ಲದೇ ಕೇಂದ್ರಪಾಡಾ ಜಿಲ್ಲೆಯ ಹತ್ತು ಗ್ರಾಮಗಳಿಗೂ ದಿಗ್ಬಂಧನ ವಿಧಿಸಲಾಗಿದೆ.

ಇದಲ್ಲದೇ, ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಉತ್ತರಪ್ರದೇಶದ 15 ಜಿಲ್ಲೆಗಳ ಹಲವು ಭಾಗಗಳನ್ನು ಏಪ್ರಿಲ್​ 15 ರವರೆಗೆ ಸಂಪೂರ್ಣವಾಗಿ ಬಂದ್​ ಮಾಡಲಾಗಿದೆ ಎಂದು ಸಿಎಂ ಯೋಗಿ ಆದಿತ್ಯನಾಥ ಬುಧವಾರ ಘೋಷಿಸಿದ್ದರು. ಯಾರೂ ಮನೆಯಿಂದ ಹೊರಗೆ ಬರುವಂತಿಲ್ಲ. ಎಲ್ಲ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net