

ಇಸ್ಲಾಮಾಬಾದ್: ಕರೊನಾ ವೈರಸ್ ವಿರುದ್ಧ ಹೋರಾಡುವುದಕ್ಕಾಗಿ ಭಾರತದ ಸಹಾಯ ಕೇಳಲು 30ಕ್ಕೂ ಅಧಿಕ ದೇಶಗಳು ತುದಿಗಾಲ ಮೇಲೆ ನಿಂತಿವೆ. ಭಾರತ ಮಲೇರಿಯಾಕ್ಕೆ ನೀಡುವ ಹೈಡ್ರೋಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ಪೂರೈಸಿದ್ದರಿಂದ ತೀವ್ರ ಸಂತೋಷಗೊಂಡಿದ್ದ ಅಮೆರಿಕ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿನ್ನೆಯಷ್ಟೇ ಹಾಡಿ, ಹೊಗಳಿದ ಬೆನ್ನಲ್ಲೇ ಈಗ ಈ ಡೆಡ್ಲಿ ವೈರಸ್ ವಿರುದ್ಧ ಹೋರಾಡಲು ವೆಂಟಿಲೇಟರ್ ನೀಡಿ ಎಂದು ಪಾಕಿಸ್ತಾನ ಭಾರತವನ್ನು ಕೋರಿಕೊಂಡಿದೆ.
‘ಈಗ ಪಾಕಿಸ್ತಾನದಲ್ಲಿ ಕರೊನಾ ವೈರಸ್‌ನಿಂದಾಗಿ ಸಂದಿಗ್ಧ ಪರಿಸ್ಥಿತಿ ಇದೆ. ತುರ್ತಾಗಿ 10 ಸಾವಿರ ವೆಂಟಿಲೇಟರ್ ಅಗತ್ಯವಿದೆ. ಅದನ್ನು ಭಾರತ ಒಂದರಿಂದಲೇ ಪೂರೈಸಲು ಸಾಧ್ಯ. ದಯವಿಟ್ಟು ನಮಗೆ 10 ಸಾವಿರದಷ್ಟು ವೆಂಟಿಲೇಟರ್ ಪೂರೈಸಿದರೆ ಉಪಕಾರ ಆಗುತ್ತದೆ’ ಎಂದು ಪಾಕ್ ಕ್ರಿಕೆಟಿಗ ಶೋಯೆಬ್ ಅಖ್ತರ್ ಪ್ರಧಾನಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ನೀವೇನಾದರೂ ನಮಗೆ ಇಷ್ಟು ಉಪಕಾರ ಮಾಡಿದರೆ, ಜೀವನ ಪರ್ಯಂತ ಇದನ್ನು ನಾವು ಮರೆಯುವುದಿಲ್ಲ. ಈ ಉಪಕಾರದಿಂದ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ವೃದ್ಧಿಯಾಗಲಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಸರಣಿ ಆಯೋಜಿಸಲು ಅನುಮತಿ ನೀಡಿ ಎಂದು ಕೋರಿಕೊಳ್ಳುವುದಷ್ಟೇ ನನ್ನಿಂದ ಸಾಧ್ಯ. ಇಂಥ ತೀರ್ಮಾನಗಳನ್ನು ಅಧಿಕಾರಿಗಳೇ ಮಾಡಬೇಕು. ಆದರೂ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ’ ಎಂದು ಅಖ್ತರ್ ಹೇಳಿದ್ದಾರೆ.
‘ನಾನು ಭಾರತಕ್ಕೆ ಅನೇಕ ಬಾರಿ ಬಂದಿದ್ದೇನೆ. ಭಾರತೀಯರು ನನ್ನ ಮೇಲೆ ತೋರಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿ. ಇಲ್ಲಿಂದ ನಾನು ತುಂಬಾ ಕಲಿತಿದ್ದೇನೆ. ಭಾರತದಲ್ಲಿ ನಾನು ಗಳಿಸಿರುವ ಶೇ. 30ರಷ್ಟು ಭಾಗವನ್ನು ನನ್ನ ಜತೆ ಕೆಲಸ ಮಾಡುವವರಿಗಾಗಿ ಮೀಸಲು ಇಡುತ್ತಿದ್ದೇನೆ. ಇದನ್ನು ಮೊದಲ ಬಾರಿಗೆ ನಾನು ಬಹಿರಂಗ ಪಡಿಸುತ್ತಿದ್ದೇನೆ ಎಂದು ಅಖ್ತರ್ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡಲು ಕ್ರಿಕೆಟಿಗ ಶಾಹಿದ್ ಆಫ್ರೀದ್ ಅವರ ಚಾರಿಟಿ ಫೌಂಡೇಷನ್‌ಗೆ ಭಾರತದ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರಿಭಜನ್ ಸಿಂಗ್ ಅವವರು ದೇಣಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರು ಕ್ರಿಕೆಟಿಗರು ಭಾರಿ ಟ್ರೋಲ್ ಆಗಿದ್ದಾರೆ. ಈ ರೀತಿ ಟ್ರೋಲ್ ಮಾಡುವುದು ಅಮಾನವೀಯ ಎಂದಿದ್ದಾರೆ ಅಖ್ತರ್. (ಏಜೆನ್ಸೀಸ್)