ಬಕ್ಕತಲೆ ನೋಡಿ ನಲವತ್ತು ವರ್ಷದವನೋ, ಅರವತ್ತು ವರ್ಷದವನೋ ಅಂದ್ಕೋಬೇಡಿ- ಆತ ಬಾಲಕ!- ಅಪ್ಪ ಕೊಟ್ಟ ಶಿಕ್ಷೆ ಹೀಗಿತ್ತು ನೋಡಿ..

balding-haircut 1
Published on

ಲಾಕ್​ಡೌನ್ ಅವಧಿಯಲ್ಲಿ ಮಕ್ಕಳನ್ನು ಲಾಲಿಸಿ ಪಾಲಿಸುವುದೇ ತುಸು ತ್ರಾಸದಾಯಕ ಕೆಲಸ. ಮನೆಯಿಂದ ಮಕ್ಕಳನ್ನು ಹೊರ ಹೋಗದಂತೆ ತಡೆಯುವುದು, ಅವರ ಗಮನವನ್ನು ಸೆಳೆದಿಟ್ಟುಕೊಂಡು ಬೇರೆಬೇರೆ ಚಟುವಟಿಕೆಗಳಲ್ಲಿ ತೊಡಗಿಸುವುದು ತುಸು ಕಷ್ಟವೇ. ಮಕ್ಕಳ ಮನಸ್ಸೂ ಅಷ್ಟೇ. ನಾಲ್ಕು ಗೋಡೆಯ ಮಧ್ಯೆ ಕೂರದು. ಹೊರಗೆ ಹೋಗಿ ಆಟ ಆಡಬೇಕು. ರಜಾಕಾಲದಲ್ಲಿ ಪ್ರಕೃತಿಯ ನಡುವೆ ಆಡುವ ಆಸೆ ಸಹಜವಾಗಿಯೆ ಇರುತ್ತದೆ. ತುಂಟ ಮಕ್ಕಳನ್ನು ಸಂಭಾಳಿಸುವುದು ಇನ್ನೂ ಕಷ್ಟ. ಪಾಲಕರು ಅವರನ್ನು ಸಂಭಾಳಿಸಲು ಹೊಸ ಹೊಸ ದಾರಿಗಳನ್ನು ಹುಡುಕುತ್ತಿರುತ್ತಾರೆ. ಫಿಲಿಪ್ಪೀನ್​ನಲ್ಲಿ ತಂದೆಯೊಬ್ಬ ಕಂಡುಕೊಂಡ ದಾರಿ ಸಾಮಾಜಿಕ ಜಾಲತಾಣಗಳಲ್ಲಿ ಜನಮನಸೂರೆಗೊಂಡಿದೆ. ಟೀಕೆಗಳನ್ನೂ ಎದುರಿಸಿದೆ.

ಮೇಲಿನ ಫೋಟೋ ನೋಡಿದ್ರೆ ನಲವತ್ತೋ, ಅರವತ್ತೋ ಆದ ಬಕ್ಕತಲೆಯ ವ್ಯಕ್ತಿ ಎಂಬ ಭಾವನೆ ಬರುವುದು ಸಹಜ. ಆತ ಫಿಲಿಪ್ಪೀನ್​ನ ಬಾಲಕ. COVID19 ಸೋಂಕಿನ ಕಾರಣ ಭಾರತದಂತೆ ಅಲ್ಲಿಯೂ ಲಾಕ್​ಡೌನ್ ಘೋಷಣೆ ಆಗಿದೆ. ಮನೆಯಿಂದ ಹೊರಬಾರದಂತೆ ಎಲ್ಲರಲ್ಲೂ ಜಾಗೃತಿ ಮೂಡಿಸಲಾಗಿದೆ. ಆದರೆ, ಈ ಬಾಲಕನಿಗೆ ಅದ್ಯಾವುದೂ ಲಗಾವೇ ಅಲ್ಲ. ಅಪ್ಪ-ಅಮ್ಮನ ಕಣ್ತಪ್ಪಿಸಿ ಎರಡೆರಡು ಬಾರಿ ಹೊರಗೋಡಿದ್ದ. ಕೊನೆಗೆ ಬಾಲಕನನ್ನು ಹೊರಗೋಡದಂತೆ ತಡೆಯುವುದೇ ಅಪ್ಪ-ಅಮ್ಮನಿಗೆ ಸವಾಲಾಗಿ ಪರಿಣಮಿಸಿತು.

ಅಪ್ಪನಿಗೊಂದು ಐಡಿಯಾ ಹೊಳೆಯಿತು. ಅಲ್ಲೆಲ್ಲ ಇಂತಹ ಉಪಾಯಗಳು ಸಹಜವಾಗಿ ಚಾಲ್ತಿಯಲ್ಲಿದೆ. ತುಂಟ ಮಕ್ಕಳ ತುಂಟಾಟಿಕೆ ಕಡಿಮೆ ಮಾಡಲು ದೊಡ್ಡವರಂತೆ ಕಾಣುವ ಹೇರ್​ಕಟ್ ಮಾಡಿಸುವ ಉಪಾಯವದು. ಕೂಡಲೇ ಮಗನನ್ನು ಹಿಡಿದಿಟ್ಟು, ತಲೆಕೂದಲು ಕತ್ತರಿಸಿ ಬಕ್ಕತಲೆಯವನಂತೆ ಮಾಡಿ ಬಿಟ್ಟರು. ಕನ್ನಡಿ ಹಿಡಿದು ತೋರಿಸಿ ಇನ್ನು ಹೊರಗೆ ಹೋಗು ಎಂದರು.

ಬಕ್ಕತಲೆ ನೋಡಿ ಬಾಲಕನಿಗೆ ಅಳುತಡೆಯಲಿಲ್ಲ. ಮನೆಯಿಂದ ಹೊರಗೆ ಕಾಲಿಡಲೂ ಇಲ್ಲ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳನ್ನೂ ಎದುರಿಸಿವೆ. ಆದರೆ, ಮಗುವನ್ನು ಮುಜುಗರಕ್ಕೀಡುಮಾಡುವ ಈ ಪ್ರಯತ್ನಕ್ಕೆ ಈ ಸಂದರ್ಭದಲ್ಲಿ ಸಮರ್ಥನೆಯೂ ಸಿಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net