ಕಾಯಂ ವೈದ್ಯರ ನೇಮಕಕ್ಕೆ ಸ್ಥಳೀಯರ ಪ್ರತಿಭಟನೆ

Kdb_doctors
Published on

ಕಡಬ: ತಾಲೂಕಿನ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ನೇಮಕಾತಿ ಆಗ್ರಹಿಸಿ ಆಸ್ಪತ್ರೆ ಮುಂಭಾಗ ಕೊಯಿಲ-ರಾಮಕುಂಜ ಜನಪರ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಶುಕ್ರವಾರ ನಡೆಯಿತು.

ಜನಪರ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ರಾವ್ ಆತೂರು ಮಾತನಾಡಿ, 7 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ 32250 ಜನರು ಆಶ್ರಯಿಸಿದ್ದಾರೆ. ಈ ಆಸ್ಪತ್ರೆಯ ವ್ಯಾಪ್ತಿಯಲ್ಲಿ 41 ಅಂಗನವಾಡಿ ಕೇಂದ್ರಗಳು, ಒಟ್ಟು 28 ಶಾಲೆಗಳು, ಕಾಲೇಜು, ಮದರಸಗಳಿವೆ. ಸುಸಜ್ಜಿತ ಕಟ್ಟಡ, ಮೂಲಸೌಕರ್ಯಗಳಿದ್ದರೂ ಕಳೆದ 8 ವರ್ಷಗಳಿಂದ ಕಾಯಂ ವೈದ್ಯರು, ಸಿಬ್ಬಂದಿಗಳ ಕೊರತೆಯಿದೆ. ಸಮಸ್ಯೆ ಪರಿಹರಿಸುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಲೇ ಬರಲಾಗಿದೆ. ಭರವಸೆ ಮಾತ್ರ ಸಿಕ್ಕಿದೆ, ವಿನಾ ಪರಿಹಾರ ಸಿಕ್ಕಿಲ್ಲ. ಹಾಗಾಗಿ ಪಕ್ಷ, ಮತ, ಜಾತಿ ಬದಿಗಿಟ್ಟು ಎಲ್ಲರು ಒಮ್ಮತದಿಂದ ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ಪ್ರತಿಭಟನೆ ಮೊದಲ ಹೆಜ್ಜೆ. ಬೇಡಿಕೆ ಈಡೇರದಿದ್ದರೆ ತಾಲೂಕುಮಟ್ಟದಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದರು.

ಜನಪರ ಹೋರಾಟ ಸಮಿತಿ ಕಾರ್ಯದರ್ಶಿ ಜುನೈದ್ ಕೆಮ್ಮಾರ, ಮುಂದಾಳು ಯದುಶ್ರೀ ಆನೆಗುಂಡಿ, ಕೊಯಿಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಫಲೂಲುದ್ಧೀನ್ ಮತ್ತಿತರರು ಮಾತನಾಡಿದರು.

ಸ್ಥಳಕ್ಕಾಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಪ್ರತಿಭಟನಾ ನಿರತರಿಂದ ಮನವಿ ಪಡೆದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಹಾಗೂ ಇಲಾಖಾ ಸಿಬ್ಬಂದಿ ಉಪಸ್ಥಿತರಿದ್ದರು. ಕೊಯಿಲ ಗ್ರಾಪಂ ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ, ಉಪಾಧ್ಯಕ್ಷ ಯತೀಶ್, ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ, ಉಪಾಧ್ಯಕ್ಷ ಕೇಶವ ಗಾಂಧಿಪೇಟೆ, ಆಲಂಕಾರು ಗ್ರಾಪಂ ಅಧ್ಯಕ್ಷೆ ಸುಶೀಲ, ಪ್ರಮುಖರಾದ ಧರ್ಮಪಾಲ ರಾವ್ ಕಜೆ, ಶೀನಪ್ಪ ಗೌಡ ವಳಕಡಮ, ಪ್ರಶಾಂತ್ ಆರ್.ಕೆ., ಬಾಲಕೃಷ್ಣ ಗೌಡ ಬೇಂಗದಪಡ್ಪು, ಹೇಮಾ ಮೋಹನ್‌ದಾಸ್ ಶೆಟ್ಟಿ, ದೇವಿಪ್ರಸಾದ್ ನೀರಾಜೆ, ಬಾಲಕೃಷ್ಣ ಭಟ್, ಸಲೀಕತ್, ಎಸ್.ಪಿ.ಖಲಂದರ್ ಮತ್ತಿತರರು ಭಾಗವಹಿಸಿದ್ದರು. ಪ್ರಕಾಶ್ ಕೆಮ್ಮಾರ ಸ್ವಾಗತಿಸಿ, ವಂದಿಸಿದರು.

ಸದ್ಯಕ್ಕೆ ತಾತ್ಕಾಲಿಕ ವ್ಯವಸ್ಥೆ

ಸ್ಥಳಕ್ಕಾಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಪ್ರತಿಭಟನಾ ನಿರತರೊಡನೆ ಮಾತನಾಡಿ, ವೈದ್ಯರ ನೇಮಕಾತಿ ಸರ್ಕಾರದ ಮಟ್ಟದಲ್ಲಿ ನಡೆಯಬೇಕಿದೆ. ಇಲ್ಲಿನ ಸಿಬ್ಬಂದಿ ನೇಮಕಾತಿಯ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸದ್ಯದ ಸಮಸ್ಯೆ ಪರಿಹರಿಸಲು ಇಲ್ಲಿಗೆ ನೆಲ್ಯಾಡಿ, ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ವಾರದಲ್ಲಿ ಎರಡು ದಿನ ನಿಯೋಜನೆ ಮಾಡಲಾಗುವುದು. ಸುಳ್ಯದ ಕೆವಿಜಿ ವೈದ್ಯಕೀಯ ಕಾಲೇಜಿನಿಂದ ಪೋಸ್ಟ್ ಗ್ರಾಜುವೇಟ್‌ಗಳನ್ನು ಕರೆಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net