ಅಂಬಾಲಕರೆಗೆ ತ್ಯಾಜ್ಯನೀರು, ಕಟ್ಟಡಗಳು ಕುಸಿಯುವ ಭೀತಿ ಸ್ಥಳೀಯರ ಆತಂಕ

ambalakere
Published on

ವಿಜಯವಾಣಿ ಸುದ್ದಿಜಾಲ ಕೋಟ

ಕೋಟ ಹಾಗೂ ಸಾಲಿಗ್ರಾಮ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಮಳೆಗಾಲದಲ್ಲಿ ರಸ್ತೆ ಇನ್ನಿತರ ತ್ಯಾಜ್ಯ ನೀರು ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಅಂಬಾಲಕೆರೆಗೆ ಹರಿಯುತ್ತಿದ್ದು, ಅಲ್ಲಿನ ಸುತ್ತಮುತ್ತಲಿನ ಕಟ್ಟಡಗಳು ಕುಸಿಯುವ ಭೀತಿ ಎದುರಾಗಿದೆ.

ಸಾಲಿಗ್ರಾಮ ಪಪಂ ಹಾಗೂ ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಎರಡು ಪ್ರದೇಶಗಳ ದಿಕ್ಕುಗಳು ಎಡ ಬಲದಂತೆ ಹೊಂದಿರುವ ಈ ಸ್ಥಳದಲ್ಲಿ ನೀರು ಹಿಂದಿನಿಂದಲೂ ಹರಿಯಲ್ಪಡುವ ಸ್ಥಳಗಳನ್ನು ಖಾಸಗಿ ಜಾಗದವರು ಬಂದ್ ಮಾಡಿದ್ದಾರೆ. ಇದರ ಪರಿಣಾಮ ನೀರು ನೇರವಾಗಿ ಕೆರೆ ತಲುಪುತ್ತಿದೆ.
ರಾಷ್ಟ್ರೀಯ ಹೆದ್ದಾರಿ ತ್ಯಾಜ್ಯಯುಕ್ತ ಕಸ, ಬಾಟಲಿ ಇನ್ನಿತರ ಕೊಳಚೆ ನೀರು ಕೆರೆ ಸೇರುತ್ತಿದೆ, ಅಲ್ಲದೆ ನೀರು ಪೂರ್ಣಪ್ರಮಾಣದಲ್ಲಿ ಕೆರೆ ತಲುಪುವ ದಿಸೆಯಿಂದ ವಿವೇಕ ವಿದ್ಯಾಸಂಸ್ಥೆ ಸೇರಿದಂತೆ ಸುತ್ತಮುತ್ತಲಿನ ಕಟ್ಟಡಗಳು ಕುಸಿಯುವ ಆತಂಕ ವ್ಯಕ್ತವಾಗಿದೆ.

ಇಲ್ಲಿನ ಇತ್ತೀಚಿಗೆ ಖಾಸಗಿ ಸ್ಥಳದ ಮೂಲಕ ಹರಿಯಲ್ಪಡುತ್ತಿದ್ದ ಈ ಮಳೆಗಾಲದ ನೀರನ್ನು ಪಪಂ ವ್ಯಾಪ್ತಿಯ ವ್ಯಕ್ತಿಯೊರ್ವರು ಬಂದ್‌ಗೊಳಿಸಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಶೀಘ್ರದಲ್ಲಿ ಕ್ರಮಕೈಗೊಂಡು ಮುಂದಿನ ಅನಾಹುತ ತಪ್ಪಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ನೀರು ಹರಿಯಲ್ಪಡುವ ವ್ಯವಸ್ಥೆಯೇ ಮೊದಲಿನಂತೆ ಪಪಂ ವ್ಯಾಪ್ತಿಯ ಶಿವರ ಮನೆ ಎದುರು ಭಾಗದ ತೋಡಿನ ಮೂಲಕ ಹರಿಯಲ್ಪಡುತ್ತಿದ್ದು, ಇದೀಗ ಅದನ್ನು ಬಂದ್ ಮಾಡಿದ್ದಾರೆ ಇದು ಸರಿಯಲ್ಲ. ಈ ಅವ್ಯವಸ್ಥೆ ಹಿನ್ನೆಲೆಯಲ್ಲಿ ಇದೀಗ ಅಸಮರ್ಪಕವಾಗಿ ಸ್ಥಳೀಯಾಡಳಿತ ಕ್ರಮಕೈಗೊಂಡಿದೆ. ಅಲ್ಲದೆ ನೀರು ಹೆದ್ದಾರಿ ಮುಖವಾಗಿ ಹರಿಯದೆ ಹೆದ್ದಾರಿಯ ತ್ಯಾಜ್ಯಯುಕ್ತ ನೀರು ಕೆರೆ ಸೇರಲ್ಪಡುತ್ತಿದೆ.-ಬಾಲಕೃಷ್ಣ ನಕ್ಷತ್ರಿ ಉಪನ್ಯಾಸಕರು ಸ್ಥಳೀಯ ನಿವಾಸಿ

ಎರಡು ವರ್ಷಗಳಿಂದ ಮಳೆಗಾಲದಲ್ಲಿ ಅಂಬಾಗಿಲು ಕೆರೆ ನೀರು ಹರಿದುಹೋಗಲು ಸಮಸ್ಯೆ ಎದುರಾಗಿದ್ದು, ಇದೀಗ ಮತ್ತೆ ಮಳೆಗಾಲ ಕೆಲವೇ ದಿನಗಳಲ್ಲಿ ಪ್ರಾರಂಭ ಆಗಲಿದ್ದು, ಇದರಿಂದ ಕೋಟತಟ್ಟು ಗ್ರಾಪಂ ವ್ಯಾಪ್ತಿಯ ಕೃಷಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ.-ಪ್ರಕಾಶ್ ಹಂದಟ್ಟು ಕೋಟತಟ್ಟು ಗ್ರಾಪಂ ವಾರ್ಡ್ ಸದಸ್ಯರು

ಕೋಟತಟ್ಟು ಭಾಗದ ಅಂಬಾಲಕೆರೆ ನೀರು ಸಾಲಿಗ್ರಾಮ ಪಪಂ ಭಾಗದ ಮೂಲಕ ಹರಿಯುವ ಸಂಬಂಧ ಸ್ಥಳ ಪರಿಶೀಲಿಸಿ ಮುಂದೆ ಅದರ ಬಗ್ಗೆ ಕ್ರಮಕೈಗೊಳ್ಳಲಿದ್ದೇವೆ.-ಶಿವರುದ್ರಯ್ಯ ಮುಖ್ಯಾಧಿಕಾರಿಸಾಲಿಗ್ರಾಮ ಪಪಂ

ಜಿಲ್ಲಾಡಳಿತಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ ಸಮಸ್ಯೆ ಶೀಘ್ರ ಪರಿಹಾರಕ್ಕೆ ಜಿಲ್ಲಾಡಳಿತ ನೆರವಿನ ಮೂಲಕ ನಾವು ಮತ್ತು ಪಪಂ ಚರ್ಚಿಸಿ ಕ್ರಮಕೈಗೊಳ್ಳಲಿದೆ.-ರವೀಂದ್ರ ರಾವ್, ಕೋಟತಟ್ಟು ಪಿಡಿಒ

ಕೋಟತಟ್ಟು ಗ್ರಾಪಂ ಹಾಗೂ ಸಾಲಿಗ್ರಾಮ ಪಪಂ ವ್ಯಾಪ್ತಿಯ ಮಳೆಗಾಲದ ಹರಿಯಲ್ಪಡುವ ನೀರಿನ ವಿಚಾರವಾಗಿ ಅಲ್ಲಿನ ಸ್ಥಳೀಯಾಡಳಿತರ ಮೂಲಕ ಸಮಸ್ಯೆ ಪರಿಹಾರಕ್ಕೆ ಸೂಚಿಸುತ್ತೇನೆ.-ವಿದ್ಯಾ ಕುಮಾರಿ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net