ಮುಂಗಾರು ಪೂರ್ವದಲ್ಲೇ ಅಪಾರ ಹಾನಿ, ಮುಂಜಾಗ್ರತಾ ಕ್ರಮ ವಹಿಸಿದ ಕಾರ್ಕಳ ತಾಲೂಕು ಆಡಳಿತ

narasappa kkl
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಮಳೆಗಾಲದಲ್ಲಿ ಜೋರಾಗಿ ಬೀಸುವ ಗಾಳಿ ಮಳೆ, ಸಿಡಿಲು ಬಡಿದು ಹಾಗೂ ಮರಗಳು ಬಿದ್ದು ಅಪಾರ ಹಾನಿಯಾಗುವುದು ಸಾಮಾನ್ಯ. ಆದರೆ ಈ ಭಾರಿ ಮುಂಗಾರು ಮಳೆ ಆರಂಭಗೊಳ್ಳುವ ಮೊದಲೇ ಸುರಿದ ಅಲ್ಪ ಮಳೆಗೆ ತಾಲೂಕಾದ್ಯಂತ ಅಪಾರ ಹಾನಿಯಾಗಿದೆ.

ಈ ಪೈಕಿ 9 ಮನೆ ಹಾನಿ, ಒಂದು ಮಾನವನ ಜೀವ ಹಾನಿಯಾಗಿದೆ. ಕಾರ್ಕಳ ಗ್ರಾಮದ ಇಂದಗುರಿ ನಿವಾಸಿ ವಿನ್ಸೆಂಟ್ ಫರ್ನಾಂಡಿಸ್ ಮನೆಗೆ ಗಾಳಿ ಮಳೆಯಿಂದ ಗಾಳಿ ರಭಸಕ್ಕೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೀರ್ಗಾನ ಗ್ರಾಮದ ಮೂಡುಬೈಲು ನಿವಾಸಿ ಸುಂದರ ಪೂಜಾರಿ ಮನೆಗೆ ತೆಂಗಿನ ಮರ ಬಿದ್ದಿದೆ. ಮಾಳ ಗ್ರಾಮದ ಕೆ.ಎಂ. ಜೋಸೆಫ್ ಮನೆಗೆ ಮರಬಿದ್ದು ನಷ್ಟ ಉಂಟಾಗಿತ್ತು. ಕೆರ್ವಾಶೆ ಗ್ರಾಮದ ಅಬ್ಬಾಸ್ ಮನೆಗೆ ಅಡಕೆ ಮರ ಬಿದ್ದು ಭಾಗಶಃ ಹಾನಿಯಾಗಿತ್ತು. ಜಯ ಎಂಬುವರ ಮನೆ ಗೋಡೆಗೆ ಸಿಡಿಲು ಬಡಿದಿತ್ತು, ನಿಟ್ಟೆ ಗ್ರಾಮದ ಕಲ್ಲಂಬಾಡಿ ಪದವು ಎಂಬಲ್ಲಿನ ಕುಟ್ಟಿ ಮೇಸ್ತ್ರಿ ಅವರ ಮನೆಗೆ ಸಿಡಿಲು ಬಡಿದು .ನಷ್ಟ ಉಂಟಾಗಿತ್ತು. ಮದನಾಡು ಸಾಧು ಮೂಲ್ಯರ ಮನೆಗೆ ಸಿಡಿಲು ಬಡಿದು ಹಾನಿಯಾಗಿತ್ತು. ಸೂಡ ಗ್ರಾಮದ ಬೇಬಿ ನಲ್ಕೆ ಮನೆಗೆ ಗಾಳಿ ಮಳೆಗೆ ಹಾನಿಯಾಗಿದೆ. ಕಾಂತಾವರ ಗ್ರಾಮದ ಕಜೆಯಲ್ಲಿ ಸಿಡಿಲು ಬಡಿದು ವಸಂತ ದೇವಾಡಿಗರ ಹಸು ಮೃತಪಟ್ಟಿದೆ. ಕಾಂತಾವರ ಗ್ರಾಮದ ಬೇಲಾಡಿ ಕೇಪ್ಲಾಜೆ ಮಾರಿಗುಡಿ ಬಳಿ ಯುವಕ ಸಿಡಿಲು ಬಡಿದು ಮೃತಪಟ್ಟ ಘಟನೆಯೂ ನಡೆದಿತ್ತು.

ಮುಂಜಾಗ್ರತಾ ಕ್ರಮ

ಮಳೆಗಾಲದಲ್ಲಿ ಸಿಡಿಲು ಬಡಿದು ಉಂಟಾಗಬಹುದಾದ ಹಾನಿಯಿಂದ ಸಂರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ತಾಲೂಕು ಕಚೇರಿಯಲ್ಲಿ ತುರ್ತು ವಿಪತ್ತು ನಿರ್ವಹಣೆಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಇದು ದಿನದ 24*7 ಸೇವೆ ನೀಡಲಿದೆ. ಸಾರ್ವಜನಿಕ ಸ್ಥಳಗಳಲ್ಲಿ, ವಿದ್ಯುತ್ ತಂತಿಗಳ ಬಳಿಯಲ್ಲಿ, ರಸ್ತೆಯ ಬದಿಯಲ್ಲಿರುವ ಅಪಾಯಕಾರಿ ಮರಗಳ ತೆರವು ಕಾರ್ಯದ ಬಗ್ಗೆ ಈಗಾಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಮುಂಗಾರು ಪೂರ್ವದಲ್ಲೇ ಮಳೆಯಿಂದ ಹಾನಿಯಾದ ಘಟನೆಗಳು ಈಗಾಗಲೇ ತಾಲೂಕಿನಲ್ಲಿ ಹಲವು ಕಡೆಗಳಲ್ಲಿ ನಡೆದಿದೆ. ಈ ಪೈಕಿ ಕೆಲವೊಂದು ಮನೆಗೆ ಮರ ಬಿದ್ದು ಹಾಗೂ ಸಿಡಿಲು ಬಡಿದು ಹಾನಿಯಾದರೇ, ಒಂದು ಜಾನುವಾರು ಜೀವ ಹಾನಿ ಮತ್ತು ಓರ್ವ ಯುವಕ ಸಿಡಿಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಮಳೆಗಾಲಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.-ನರಸಪ್ಪ, ತಹಸೀಲ್ದಾರ್ ಕಾರ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net